ಪಾಕಿಸ್ತಾನ ಆಡಳಿತಾರೂಢ ಸರಕಾರ ಉರುಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಬಲವಾದ ಊಹಾಪೋಹದ ನಡುವೆಯೂ, ತಮ್ಮ ಪಕ್ಷ ಪ್ರಜಾಪ್ರಭುತ್ವ ಸರಕಾರವನ್ನು ಉರುಳಿಸಿ ಯಾವುದೇ ಸರ್ವಾಧಿಕಾರಿಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಪಿಎಂಎಲ್ಎನ್ ವರಿಷ್ಠ ನವಾಜ್ ಶರೀಫ್ ಸ್ಪಷ್ಟಪಡಿಸಿದ್ದಾರೆ.
ಮಿಲಿಟರಿ ಮಾಜಿ ಆಡಳಿತಗಾರ ಪರ್ವೆಜ್ ಮುಷರ್ರಫ್ ಅವರ ವಿರುದ್ಧ ರಾಜದ್ರೋಹದ ದೂರನ್ನು ದಾಖಲಿಸುವುದಾಗಿಯೂ ನವಾಜ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮುಷ್ ಈಗ ವಿದೇಶದಲ್ಲಿ ವಾಸವಾಗಿದ್ದಾರೆ.
ನಮ್ಮ ಪಕ್ಷ ಯಾವೊಬ್ಬ ಸರ್ವಾಧಿಕಾರಿಯನ್ನು ಬೆಂಬಲಿಸುವುದಿಲ್ಲ, ನೂತನ ಸರಕಾರ ರಚಿಸುವ ನಿಟ್ಟಿನಲ್ಲಿ ಯಾವುದೇ 'ಕುದುರೆ ವ್ಯಾಪಾರ'ಕ್ಕೂ ಮುಂದಾಗುವುದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಡಳಿತಾರೂಢ ಸರಕಾರ ಭ್ರಷ್ಟಾಚಾರ ಎಸಗುವುದನ್ನೂ ಕೂಡ ಪಿಎಂಎಲ್ಎನ್ ಪಕ್ಷ ಬೆಂಬಲಿಸುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದ ಸರಕಾರ ಸ್ವೀಕರಿಸುವ ಮೂಲಕ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಉಲ್ಲೇಖಿಸದೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ನಾವು ಸುಪ್ರೀಂಕೋರ್ಟ್ ಪರವಾಗಿಯೇ ಇದ್ದೆವೆಯೇ ವಿನಃ ಪಾಕ್ ಸರಕಾರದ ಜೊತೆಗೆ ಅಲ್ಲ ಎಂದರು.