ಪಾಕಿಸ್ತಾನದೊಂದಿಗೆ ಕಾಶ್ಮೀರ ವಿಚಾರ ಚರ್ಚಿಸಲು ಸಿದ್ಧ: ಕೃಷ್ಣ
ನ್ಯೂಯಾರ್ಕ್, ಶನಿವಾರ, 25 ಸೆಪ್ಟೆಂಬರ್ 2010( 18:42 IST )
ಪಾಕಿಸ್ತಾನದ ಇತ್ತೀಚಿನ ಅಧಿಕ ಪ್ರಸಂಗದ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮತ್ತೆ ಮಾತುಕತೆಯ ಪ್ರಸ್ತಾಪ ಮಾಡಿರುವ ಭಾರತ, ಕಾಶ್ಮೀರ ಸೇರಿದಂತೆ ಎಲ್ಲಾ ವಿಚಾರಗಳ ಕುರಿತು ಇಸ್ಲಾಮಾಬಾದ್ ಜತೆ ಚರ್ಚಿಸಲು ತಾನು ಸಿದ್ಧನಿದ್ದೇನೆ ಎಂದಿದೆ.
ಅವರು ಚರ್ಚಿಸಲು ಬಯಸುತ್ತಿರುವ ಎಲ್ಲಾ ವಿಚಾರಗಳು ಮತ್ತು ನಾವು ಅವರೊಂದಿಗೆ ಚರ್ಚಿಸಬೇಕೆಂದಿರುವ ಎಲ್ಲಾ ವಿಚಾರಗಳನ್ನು ಚರ್ಚಿಸಲಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರ ಭಾರತದ ಸಂಭಾವ್ಯ ಭೇಟಿಯ ಕುರಿತು ಸುಳಿವು ನೀಡುತ್ತಾ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಕಾಶ್ಮೀರವನ್ನು ಭಾರತ ತನ್ನ ಅವಿಭಾಜ್ಯ ಅಂಗವೆಂದು ಉಚಪರಿಸುವುದನ್ನು ಸ್ಥಗಿತಗೊಳಿಸದ ಹೊರತು ಆ ದೇಶದ ಜತೆಗಿನ ಮಾತುಕತೆಗಳಲ್ಲಿ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಹೇಳಿಕೆ ಮತ್ತು ಈ ವಿಚಾರದಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸಬೇಕು ಎಂಬ ಖುರೇಷಿ ಮಾತಿನ ಕುರಿತು ಪ್ರಶ್ನಿಸಿದಾಗ ಮೇಲಿನಂತೆ ಕೃಷ್ಣ ಪ್ರತಿಕ್ರಿಯಿಸಿದರು.
ವಿಶ್ವಸಂಸ್ಥೆಯ ಮಹಾಸಭೆಗಾಗಿ ಅಮೆರಿಕಾಕ್ಕೆ ತೆರಳಿರುವ ಸಚಿವರಿಗೆ ಖುರೇಷಿಯವರು ಭಾರತ ಪ್ರವಾಸ ಮಾಡುವ ಬಗ್ಗೆ ಆಶಾಭಾವ ಹೊಂದಿದ್ದಾರೆ.
ನಾನು ಇಸ್ಲಾಮಾಬಾದ್‌ಗೆ ತೆರಳಿದ್ದ ವೇಳೆ ಮಾತುಕತೆ ನಡೆಸಿದ್ದು, ಖುರೇಷಿಯವರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ನನ್ನ ಆಹ್ವಾನವನ್ನು ಉದಾರತೆಯಿಂದ ಸ್ವೀಕರಿಸಿದ್ದರು. ಹಾಗಾಗಿ ದೆಹಲಿಯಲ್ಲಿನ ಮಾತುಕತೆಯನ್ನು ನಾನು ಎದುರು ನೋಡುತ್ತಿದ್ದೇನೆ. ಈ ಕುರಿತು ಇನ್ನಷ್ಟೇ ದಿನಾಂಕ ನಿಗದಿಯಾಗಬೇಕಿದೆ ಎಂದರು.
ನ್ಯೂಯಾರ್ಕ್‌ನಲ್ಲಿರುವ ಖುರೇಷಿ ಕಳೆದ ಕೆಲವು ದಿನಗಳಿಂದ ಕಾಶ್ಮೀರ ವಿಚಾರವನ್ನು ಸಿಕ್ಕ-ಸಿಕ್ಕ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಿದ್ದು, ಅಂತಾರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಾ ಬಂದಿದ್ದಾರೆ.
ಏಷಿಯಾ ಸಮುದಾಯದ ಸಣ್ಣ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪಾಕ್ ವಿದೇಶಾಂಗ ಸಚಿವ, ಕಾಶ್ಮೀರವು ದಕ್ಷಿಣ ಏಷಿಯಾದ ವ್ರಣವಾಗುತ್ತಿದೆ ಎಂದು ಬಣ್ಣಿಸಿದ್ದರು.
ಜಗತ್ತಿನ ನಾಯಕನೆಂದು ಗುರುತಿಸಿಕೊಳ್ಳುತ್ತಿರುವ ಅಮೆರಿಕಾವು ಈ ಕುರಿತು ಹೆಚ್ಚಿನ ಜವಾಬ್ದಾರಿ ಹೊಂದಿದ್ದು, ಕಾಶ್ಮೀರಕ್ಕೆ ಶಾಂತಿಯುತ ಪರಿಹಾರಕ್ಕೆ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದರು.