ಬ್ರಿಟನ್‌ನ ರಾಜಪ್ರಭುತ್ವ ಹಾಗೂ ಅದರ ಸಂಪ್ರದಾಯಗಳು ಅವಿವೇಕತನದ್ದು ಹಾಗೂ ಪುರಾತನವಾದುದ್ದು ಎಂದು ಭಾರತೀಯ ಮೂಲದ ಲೇಖಕ ಸಲ್ಮಾನ್ ರಷ್ದಿ ಹೇಳಿಕೆ ನೀಡಿರುವುದು ಕೋಲಾಹಲ ಸೃಷ್ಟಿಸಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ತಮ್ಮ ಲೇಖನಗಳ ಮೂಲಕ ಮುಸ್ಲಿಂ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದ ರಷ್ದಿ, ಬ್ರಿಟನ್‌ನ ರಾಜಪ್ರಭುತ್ವ ಮತ್ತು ಅದರ ಸಂಪ್ರದಾಯಗಳು ಪುರಾತನ ಹಾಗೂ ಮೂರ್ಖತನದಿಂದ ಕೂಡಿದ್ದು,ಬ್ರಿಟಿಷರ ವಿಲಕ್ಷಣ ಸ್ಥಿತಿಯ ಪರಮಾವಧಿ ಎಂದು ಟೀಕಿಸಿದ್ದಾರೆ.
ಬ್ರಿಟನ್ ರಾಜಪ್ರಭುತ್ವ ಪುರಾತನವಾದುದ್ದು, ಎಂದು ಟೀಕಿಸುತ್ತಿರುವ ನೀವು ಬ್ರಿಟನ್ ನಾಗರಿಕರಾಗಿ ನೈಟ್‌ಹುಡ್ ಪ್ರಶಸ್ತಿ ಸ್ವೀಕರಿಸಲು ಕಾರಣವೇನು?ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಷ್ದಿ, ಫ್ರಾನ್ಸ್ ಕೂಡಾ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿತ್ತು.ನನ್ನದೆ ದೇಶದ ಪ್ರಶಸ್ತಿಯನ್ನು ತಳ್ಳಿಹಾಕುವುದು ಸೂಕ್ತವಲ್ಲ ಎನ್ನುವುದು ನನ್ನ ಭಾವನೆಯಾಗಿದೆ ಎಂದು ಹೇಳಿದ್ದಾರೆ.
63 ವರ್ಷ ವಯಸ್ಸಿನ ಸಲ್ಮಾನ್ ರಷ್ದಿ, ಬ್ರಿಟನ್‌ನಲ್ಲಿ ಆಚರಿಸಲಾಗುತ್ತಿರುವ ರಾಜಪ್ರಭುತ್ವದ ಸಮಾರಂಭಗಳು ಪುರಾತನ ಮತ್ತು ಅವಿವೇಕತನದಿಂದ ಕೂಡಿವೆ. ಆದರೂ ನಾವು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಪರ್ಯಾಸವಾಗಿದೆ ಎಂದು ವ್ಯಂಗವಾಡಿದ್ದಾರೆ.