ಮೆಲ್ಬೊರ್ನ್, ಸೋಮವಾರ, 27 ಸೆಪ್ಟೆಂಬರ್ 2010( 12:58 IST )
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಾಕಷ್ಟು ಅಸಮಾಧಾನ ಹುಟ್ಟುಹಾಕಿದ್ದ ಜನಾಂಗೀಯ ದಾಳಿ ಪ್ರಕರಣ ಇದೀಗ ಮತ್ತೆ ಮರುಕಳಿಸಿದ್ದು, ಆಸ್ಟ್ರೇಲಿಯಾದಲ್ಲಿ 21ರ ಹರೆಯದ ಭಾರತೀಯನ ಮೇಲೆ ಜನಾಂಗೀಯ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಭಾನುವಾರ ಸ್ಯಾನ್‌ಡೌನ್ ರೈಲ್ವೆ ನಿಲ್ದಾಣ ಸಮೀಪ ಯುವಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಆಗಮಿಸಿದ್ದ ನಾಲ್ವರು ಬಾಲಕರು ಆತನನ್ನು ಅಡ್ಡಗಟ್ಟಿ, ನೀನು ಭಾರತೀಯನಾ?ಎಂದು ಪ್ರಶ್ನಿಸಿದ್ದರು. ಆಗ ಆತ ಭಯದಿಂದ ಸುಳ್ಳು ಹೇಳಿದಾಗ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿ ಜೋ ಹೈಡೆನ್ ತಿಳಿಸಿದ್ದಾರೆ.
ಹೊಡೆತದಿಂದ ಕೆಳಗೆ ಬಿದ್ದಿದ್ದ ಭಾರತೀಯ ಯುವಕನನ್ನು ದಾರಿಹೋಕ ಪ್ರಯಾಣಿಕರಿಬ್ಬರು ಆತನ ಮನೆಗೆ ಕರೆತಂದಿದ್ದರು. ಆತನ ಮೂಗು ಮತ್ತು ತಲೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದು, ಹಲ್ಲೆ ನಡೆಸಿದ ಮಕ್ಕಳು 15ರಿಂದ 16ರ ವರ್ಷದವರಾಗಿದ್ದಾರೆಂದು ಆತ ಪೊಲೀಸರಿಗೆ ವಿವರಿಸಿದ್ದಾನೆ.
ಹಲ್ಲೆ ಘಟನೆಯಿಂದ ತಮಗೆ ಆಘಾತವಾಗಿರುವುದಾಗಿ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ವಿಕ್ಟೋರಿಯಾದ (ಎಫ್ಐಎವಿ) ಅಧ್ಯಕ್ಷ ವಾಸನ್ ಶ್ರೀನಿವಾಸನ್ ತಿಳಿಸಿದ್ದಾರೆ. ನಾವು ಮತ್ತೇನೂ ಹೇಳುವುದಿಲ್ಲ, ಬೇರೆಯವರನ್ನು ಗೌರವಿಸುವುದನ್ನು ಕಲಿತುಕೊಳ್ಳಿ. ಸೌಹಾರ್ದತೆಯಿಂದ ಬಾಳಿ, ಹಲ್ಲೆ, ದ್ವೇಷ ಯಾಕೆ ಎಂದು ಅವರು ಪ್ರಶ್ನಿಸಿರುವುದಾಗಿ ಪತ್ರಿಕೆಯೊಂದರ ವರದಿ ತಿಳಿಸಿದೆ.