ಭಗ್ನ ಪ್ರೇಮಿಗಳು, ದಾಂಪತ್ಯ ವಿರಸ, ಕಡಿಮೆ ಅಂಕಬಂದಿದ್ದಕ್ಕೆ...ಹೀಗೆ ನಾನಾ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವವರು ಹೆಚ್ಚೆಂದರೆ ಒಂದು, ಎರಡ್ಮೂರು ಪುಟಗಳ ಆತ್ಮಹತ್ಯೆ ನೋಟ್ ಬರೆಯಬಹುದು. ಆದರೆ ಇಲ್ಲಿನ ಹಾರ್ವರ್ಡ್ ಯೂನಿರ್ವಸಿಟಿ ಸಮೀಪ 35ರ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 1905 ಪುಟಗಳ ಸೂಯಿಸೈಡ್ ನೋಟ್ ಬರೆದಿಟ್ಟಿದ್ದಾನೆ! ಈತ ಇದಕ್ಕಾಗಿಯೇ ಐದು ವರ್ಷ ತೆಗೆದುಕೊಂಡಿದ್ದಾನಂತೆ.
ಮಿಚೆಲ್ಲ್ ಹಾಯಿಸ್‌ಮ್ಯಾನ್ ಎಂಬಾತ ಸೆಪ್ಟೆಂಬರ್ 18ರಂದು ಹಾರ್ವರ್ಡ್ ಯಾರ್ಡ್ ಬಳಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಸಾಯುವ ಮುನ್ನ ತನ್ನ ಕುಟುಂಬ ವರ್ಗ ಹಾಗೂ ಸುಮಾರು 400 ಗೆಳೆಯರಿಗೆ ಇ-ಮೇಲ್ ಮೂಲಕ 1905 ಪುಟಗಳಷ್ಟು ಆತ್ಮಹತ್ಯೆ ನೋಟ್ ಕಳುಹಿಸಿದ್ದ.
'ಶೂನ್ಯವಾದದ' ಮೇಲೆ ನಂಬಿಕೆ ಹೊಂದಿದ್ದ ಹಾಯಿಸ್‌ಮ್ಯಾನ್, ತನ್ನ ಮನೆಯವರು ಮತ್ತು ಗೆಳೆಯರಿಗಾಗಿ ಬರೆದ ಆತ್ಮಹತ್ಯಾ ಟಿಪ್ಪಣಿಯಲ್ಲಿ ಶೂನ್ಯವಾದದ ಬಗ್ಗೆಯೇ ವಿವರಿಸಿದ್ದಾನಂತೆ. ಆತ ಸುಮಾರು ಐದು ವರ್ಷಗಳ ಕಾಲ ಕೂತು ಬರೆದ ದೀರ್ಘ ಟಿಪ್ಪಣಿಯಲ್ಲಿ 1,433 ಅಡಿ ಟಿಪ್ಪಣಿಗಳಿವೆ, 20 ಪುಟಗಳಷ್ಟು ಗ್ರಂಥಸೂಚಿ, ದೇವರ ಬಗ್ಗೆ 1,700 ಪ್ರಸ್ತಾಪ ಹಾಗೂ ಜರ್ಮನ್ ಖ್ಯಾತ ತತ್ವಜ್ಞಾನಿ ಫೆಡರಿಕ್ ನೀತ್ಸೆಯ 200 ಪ್ರಸ್ತಾಪಗಳನ್ನು ವಿವರಿಸಿದ್ದಾನೆ.
'ನಮ್ಮ ಜೀವನದ ಪ್ರತಿ ಶಬ್ದ, ಪ್ರತಿ ಚಿಂತನೆ ಹಾಗೂ ಎಲ್ಲಾ ಭಾವನೆಗಳು ಒಂದೊಂದು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ನಿಜಕ್ಕೂ ಜೀವನ ಅರ್ಥರಹಿತವಾದದ್ದು. ಆದರೂ ಇವೆಲ್ಲರಿಂದ ಹೊರಬರಲು ಶೂನ್ಯವಾದದ ಪ್ರಯೋಗ ನಡೆಸಿದೆ. ಇದರಿಂದಾಗಿ ಪ್ರತಿಯೊಂದು ಭ್ರಮೆ, ಪ್ರತಿಯೊಂದು ನಂಬಿಕೆಯ ನಗ್ನಸತ್ಯ ಅನಾವರಣವಾಗುತ್ತ ಹೋಯಿತು. ಹಾಗಾಗಿ ಬದುಕಿನಲ್ಲಿ ಏನೂ, ಯಾವುದಕ್ಕೂ ಅರ್ಥವಿಲ್ಲ ಎಂದು ತಿಳಿದು ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ' ಎಂದು ಹಾಯಿಸ್‌ಮ್ಯಾನ್ ತನ್ನ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ.
ಬದುಕು ನಿಜಕ್ಕೂ ಅರ್ಥವಿಲ್ಲದ್ದು ಹಾಗೂ ಅದರಲ್ಲಿ ಯಾವುದೇ ಮೂಲಭೂತವಾದ ಬದಲಿ ಅವಕಾಶವೇ ಇಲ್ಲ. ಎಲ್ಲಾ ಆಯ್ಕೆಯೂ ಒಂದೇ. ಆ ಎಲ್ಲಾ ಜಂಜಾಟಕ್ಕೆ ಮುಕ್ತಿ ನೀಡುವುದು ಸಾವು ಒಂದೇ ಎಂಬುದಾಗಿಯೂ ಆತ ವಿವರಿಸಿದ್ದಾನೆ. ತನ್ನ ದೀರ್ಘ ದಾಖಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಥೋಮಸ್ ಜೆಫೆರ್ಸನ್ ಹಾಗೂ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ ಉದಾಹರಣೆಯನ್ನೂ ನೀಡಿದ್ದಾನೆ.
ನ್ಯೂಜೆರ್ಸಿ ನಿವಾಸಿಯಾಗಿರುವ ಹಾಯಿಸ್‌ಮ್ಯಾನ್ ಕಾಲೇಜಿನಲ್ಲಿ ಸೈಕೋಲಾಜಿ ಅಭ್ಯಾಸ ಮಾಡಿದ್ದ. ಅಲ್ಲದೇ ತಾನು ಹಿಸ್ಟರಿ ಆಫ್ ದಿ ನೋರ್ಮನ್ ಕಾಂಕ್ವೆಸ್ಟ್ ಆಫ್ ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಮನೆಯವರು ಮತ್ತು ಗೆಳೆಯರಿಗೆ ತಿಳಿಸಿದ್ದ. ಅಂತೂ ಶೂನ್ಯವಾದದ ಬೆನ್ನತ್ತಿದ್ದ ಹಾಯಿಸ್‌ಮ್ಯಾನ್ ಹಾರ್ವರ್ಡ್ ಯೂನಿರ್ವಸಿಟಿ ಎದುರೇ ಆತ್ಮಹತ್ಯೆಗೆ ಶರಣಾಗಿದ್ದ.