ಲಂಡನ್, ಫ್ರಾನ್ಸ್ ಹಾಗೂ ಜರ್ಮನಿಯ ಪ್ರಮುಖ ನಗರಗಳ ಮೇಲೆ ಏಕಕಾಲದಲ್ಲಿ ಮುಂಬೈ ಮಾದರಿಯ ಭಯೋತ್ಪಾದನಾ ದಾಳಿ ನಡೆಸಲು ಅಲ್ ಖಾಯಿದಾ ಸಂಪರ್ಕದ ಉಗ್ರಗಾಮಿಗಳು ವ್ಯವಸ್ಥಿತ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದಾಗಿ ವರದಿಯೊಂದು ಹೇಳಿದೆ.
2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕರ ವಿವಿಧೆಡೆ ಏಕಕಾಲದಲ್ಲಿ ನಡೆಸಿದ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. ಇದೀಗ ಮುಂಬೈ ದಾಳಿ ಮಾದರಿಯಲ್ಲೇ ಲಂಡನ್, ಫ್ರಾನ್ಸ್, ಜರ್ಮನಿಗಳಲ್ಲಿಯೂ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಬ್ರಿಟಿನ್ ಭದ್ರತಾ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಈ ದಾಳಿಯ ಸಂಚನ್ನು ಪಾಕಿಸ್ತಾನ ಮೂಲದ ಉಗ್ರರು ನಡೆಸಿರುವುದಾಗಿಯೂ ಅಧಿಕಾರಿಗಳು ವಿವರಿಸಿದ್ದಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಅಮೆರಿಕದ ಮಿಲಿಟರಿ ಪಡೆಗಳು ನಡೆಸುತ್ತಿರುವ ಡ್ರೋನ್ ದಾಳಿಗೆ ಪ್ರತೀಕಾರ ತೀರಿಸಲು ಈ ದಾಳಿಯ ಸಂಚು ನಡೆಸಿರುವುದಾಗಿ ಗುಪ್ತಚರ ಮೂಲಗಳು ಹೇಳಿವೆ.
ಮುಂಬೈ ಮಾದರಿಯಲ್ಲಿ ನಡೆಸಿದಂತೆಯೇ ಏಕಕಾಲದಲ್ಲಿ ದಾಳಿ ನಡೆಸುವ ಸಂಚು ಉಗ್ರರದ್ದಾಗಿದೆ. ಆದರೆ ದಾಳಿಕೋರರು ಈಗಾಗಲೇ ಯುರೋಪ್‌ನಲ್ಲಿ ಠಿಕಾಣಿ ಹೂಡಿದ್ದಾರೆಂಬಯೇ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.