ನ್ಯೂ ಮೆಕ್ಸಿಕೋ, ಬುಧವಾರ, 29 ಸೆಪ್ಟೆಂಬರ್ 2010( 17:41 IST )
'ತನ್ನ ಆಯ್ಕೆ ಕ್ರಿಶ್ಚಿಯನ್ ಧರ್ಮ' ಎಂಬುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮಂಗಳವಾರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಬಹಿರಂಗಗೊಂಡ ನೂತನ ಸಮೀಕ್ಷೆಯಲ್ಲಿ ಬಹುತೇಕ ಅಮೆರಿಕನ್ ಪ್ರಜೆಗಳು ಬರಾಕ್ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ನ್ಯೂ ಮೆಕ್ಸಿಕೋ ಬ್ಯಾಕ್‌ಯಾರ್ಡ್‌ನಲ್ಲಿ ಮತದಾರರ ಜತೆಗಿನ ಸಂವಾದದ ವೇಳೆ, ಮಹಿಳೆಯೊಬ್ಬಳು ಧಾರ್ಮಿಕ ನಂಬಿಕೆ ಕುರಿತ ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಬರಾಕ್, ನನ್ನ ಆಯ್ಕೆ ಕ್ರಿಶ್ಚಿಯನ್ ಧರ್ಮ ಎಂದು ಹೇಳಿದರು.
ಆದರೆ ತನ್ನ ಕುಟುಂಬ ಇತ್ತೀಚೆಗೆ ಚರ್ಚ್‌ಗೆ ಹೋಗುತ್ತಿರುವ ಬಗ್ಗೆ ತಾನು ಹೆಚ್ಚಿಗೆ ಏನೂ ಹೇಳಲಾರೆ ಎಂದಿರುವ ಬರಾಕ್, ತಾನು ತನ್ನ ಜೀವನದಲ್ಲಿ ನಿಧಾನಕ್ಕೆ ಕ್ರಿಶ್ಚಿಯಾನಿಟಿ ಪಾಲಿಸುವುದಾಗಿ ಹೇಳಿದ್ದಾರೆ. ಜೀಸಸ್ ಕ್ರಿಸ್ತ್ ತನ್ನ ಮೇಲೆ ತುಂಬಾ ಪ್ರಭಾವ ಬೀರಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಾವೆಲ್ಲರೂ ಕೂಡ ಜೀಸಸ್ ಕ್ರಿಸ್ತನ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಆದರೂ ಅಮೆರಿಕನ್ ಪ್ರಜೆಗಳು ಸಂವಿಧಾನಾತ್ಮಕವಾಗಿ ಎಲ್ಲ ಧರ್ಮಿಯರಿಗೂ ಅವರ ಧರ್ಮವನ್ನು ಆಚರಿಸುವ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಮತ್ತು ಎಲ್ಲಾ ಧರ್ಮವನ್ನು ಗೌರವಿಸಬೇಕು ಎಂದು ಬರಾಕ್ ಸಲಹೆ ನೀಡಿದ್ದಾರೆ.