ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಿಂದ ಮಾವೋ ವರಿಷ್ಠ ಪ್ರಚಂಡ ಹಿಂದೆ ಸರಿಯುವುದಕ್ಕೂ ಮುನ್ನ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಯುಎಂಎಲ್ ರಹಸ್ಯ ಒಪ್ಪಂದ ಮಾಡಿಕೊಂಡಿತ್ತು ಎಂಬ ಮಾಧ್ಯಮಗಳ ವರದಿಯನ್ನು ಪ್ರಧಾನಿ ಮಾಧವ್ ಕುಮಾರ್ ನೇಪಾಳ್ ತಳ್ಳಿಹಾಕಿದ್ದಾರೆ.
ಆಡಳಿತಾರೂಢ ಪಕ್ಷದ ಹತ್ತು ಮಂದಿ ಸದಸ್ಯರ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮಾಧವ್ ಕುಮಾರ್ ಅವರು, ಮಾವೋವಾದಿಗಳ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಆದರೆ ನೂತನ ಸರಕಾರ ಹಾಗೂ ಪ್ರಧಾನಿ ಆಯ್ಕೆಯ ಹಾದಿ ಸುಗಮವಾಗುವ ದೃಷ್ಟಿಯಿಂದ ಪ್ರಚಂಡ ಅವರು ಒಮ್ಮತಾಭಿಪ್ರಾಯದ ಮೇಲೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಆದರೆ ಪ್ರಚಂಡ ಅವರು ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿಯಲು ಮಾವೋ ಪಕ್ಷದ ಜತೆ ನೇಪಾಳಿ ಕಾಂಗ್ರೆಸ್ ಪಕ್ಷ ರಹಸ್ಯ ಒಪ್ಪಂದ ಮಾಡಿಕೊಂಡಿತ್ತು ಎಂಬ ವರದಿ ಸತ್ಯಕ್ಕೆ ದೂರವಾದದ್ದು ಎಂದರು. ಈ ಬಗ್ಗೆ ರಾಜಕೀಯ ಪಕ್ಷಗಳು ಕೂಡ ಅಪಸ್ವರ ಎತ್ತಿತ್ತರ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನೇಪಾಳ ಪ್ರಧಾನಿ ಆಯ್ಕೆಗಾಗಿ ಸುಮಾರು ಏಳು ಬಾರಿ ಚುನಾವಣೆ ನಡೆಯಿತಾದರೂ, ಪ್ರಧಾನಿ ಆಯ್ಕೆ ವಿಫಲವಾಗಿತ್ತು. ಏತನ್ಮಧ್ಯೆ ಮಾವೋ ಪಕ್ಷದ ವರಿಷ್ಠ ಪ್ರಚಂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ನೇಪಾಳಿ ಕಾಂಗ್ರೆಸ್‌ನ ಪೌಡ್ಯಾಲ್ ಅವರು ಅಖಾಡದಲ್ಲಿರುವ ಮೂಲಕ ನೂತನ ಪ್ರಧಾನಿ ಆಯ್ಕೆ ಕಸರತ್ತು ಮುಂದುವರಿದಿದೆ.