ಶಾರ್ಜಾದಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಹತ್ಯೆಗೈದಿರುವ ಆರೋಪದಲ್ಲಿ 17 ಮಂದಿ ಭಾರತೀಯರು ಗಲ್ಲುಶಿಕ್ಷೆಯ ಶಿಕ್ಷೆಗೆ ಗುರಿಯಾಗುವ ಹಂತದಲ್ಲಿದ್ದರು. ಆದರೆ ಬುಧವಾರ ಪ್ರಕರಣದ ಏಕೈಕ ಸಾಕ್ಷಿ ಕೆಳ ನ್ಯಾಯಾಲಯದಲ್ಲಿ ಆರೋಪಿಗಳ ಗುರುತು ಪತ್ತೆ ಹಚ್ಚಲು ವಿಫಲವಾಗಿರುವುದು ಶಿಕ್ಷೆಯ ಭಯದಲ್ಲಿದ್ದವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಿ ಪ್ರಜೆ ಮುಶ್ತಾಕ್ ಅಹ್ಮದ್‌ಗೆ ನ್ಯಾಯಾಲಯ ಆರೋಪಿಗಳ ಗುರುತು ಹಿಡಿಯುವಂತೆ ಸಮನ್ಸ್ ನೀಡಿತ್ತು. ಆ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಅಹ್ಮದ್ ಭಾರತೀಯ ಪ್ರಜೆಗಳ ಗುರುತು ಪತ್ತೆ ಹಚ್ಚಲು ವಿಫಲರಾಗಿರುವುದಾಗಿ ಆರೋಪಿಗಳ ಪರ ವಕೀಲರಾದ ಬಿಂದು ಸುರೇಶ್ ಚೆಟ್ಟೂರ್ ಪಿಟಿಐಗೆ ತಿಳಿಸಿದ್ದಾರೆ.
2009ರ ಜನವರಿ ತಿಂಗಳಲ್ಲಿ ಶಾರ್ಜಾದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಹತ್ಯೆಗೈದು, ಇತರ ಮೂವರು ಗಾಯಗೊಂಡಿರುವ ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾರ್ಚ್ ತಿಂಗಳಿನಲ್ಲಿ 17 ಭಾರತೀಯರನ್ನು ದೋಷಿ ಎಂದು ತೀರ್ಪು ನೀಡಿತ್ತು.
ಆ ನಿಟ್ಟಿನಲ್ಲಿ ಕೋರ್ಟ್‌ನಲ್ಲಿ ಆರೋಪಿಗಳನ್ನು ಗುರುತಿಸುವಲ್ಲಿ ಸಾಕ್ಷಿ ವಿಫಲವಾಗಿರುವುದು ಸಮಾಧಾನಕರ ಸಂಗತಿ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಬಿಂದು, ನ್ಯಾಯಾಲಯ ಶೀಘ್ರದಲ್ಲೇ ತನ್ನ ತೀರ್ಪು ನೀಡಲಿದೆ ಎಂದರು. ಅಲ್ಲದೆ, ಸಾವನ್ನಪ್ಪಿರುವ ಪಾಕಿಸ್ತಾನಿ ಪ್ರಜೆಯ ಶವಪರೀಕ್ಷೆಯಲ್ಲಿಯೂ ಆತ ಮಿತಿಮೀರಿ ಮದ್ಯಪಾನ ಮಾಡಿರುವ ಅಂಶವನ್ನೂ ಕೂಡ ವೈದ್ಯರು ನೀಡಿರುವುದಾಗಿ ವಿವರಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 13ರಂದು ನಡೆಯಲಿದ್ದು, ಆ ಸಂದರ್ಭದಲ್ಲಿ ತಮ್ಮ ವಾದವನ್ನು ಮಂಡಿಸುವುದಾಗಿ ವಕೀಲೆ ಬಿಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಶ್ತಾಕ್ ಯಾರೊಬ್ಬರನ್ನೂ ಗುರುತಿಸಿಲ್ಲ, ಘರ್ಷಣೆ ನಡೆಯುವ ಸಂದರ್ಭದಲ್ಲಿ 30-40 ಮಂದಿ ಇದ್ದಿದ್ದರು. ಹಾಗಾಗಿ ಗ್ರಹಿಕೆಯ ನೆಲೆಯಲ್ಲಿ ಗುರುತಿಸಲು ಸಾಧ್ಯವಾಗದು. ಇದರಿಂದಾಗಿ ಪ್ರಕರಣದಲ್ಲಿ ತಾವು ಜಯ ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.