ಹುಷಾರ್...ಪಾಕ್‌ನಲ್ಲಿ ಮತ್ತೆ ಮಿಲಿಟರಿ ಆಡಳಿತ: ಮುಷ್ ಎಚ್ಚರಿಕೆ
ಇಸ್ಲಾಮಾಬಾದ್, ಗುರುವಾರ, 30 ಸೆಪ್ಟೆಂಬರ್ 2010( 15:33 IST )
ಪಾಕಿಸ್ತಾನ ಮತ್ತೊಮ್ಮೆ ಸರ್ವಾಧಿಕಾರಿಯ ಆಡಳಿತಕ್ಕೆ ಒಳಪಡುವ ಅಪಾಯದಲ್ಲಿರುವುದಾಗಿ ಪಾಕಿಸ್ತಾನ ಮಿಲಿಟರಿಯ ಮಾಜಿ ವರಿಷ್ಠ ಪರ್ವೆಜ್ ಮುಷರ್ರಫ್ ಎಚ್ಚರಿಸಿದ್ದಾರೆ. ಅಲ್ಲದೇ ದೇಶದ ಬಿಕ್ಕಟ್ಟಿನ ರಾಜಕೀಯ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಮಿಲಿಟರಿ ಸಂವಿಧಾನಬದ್ದ ಕ್ರಮವನ್ನು ಕೈಗೊಳ್ಳುವುದು ಸೂಕ್ತ ಎಂಬುದಾಗಿಯೂ ತಿಳಿಸಿದ್ದಾರೆ.
ಪ್ರಸ್ತುತ ಮುಷರ್ರಫ್ ಬ್ರಿಟನ್‌ನಲ್ಲಿದ್ದು, ಪಾಕಿಸ್ತಾನಕ್ಕೆ ಮರಳುವ ಯತ್ನದಲ್ಲಿದ್ದಾರೆ. ದೇಶದಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಅಧ್ಯಕ್ಷ ಅಸಿಫ್ ಅಲಿ ವಿರುದ್ಧ ಆರ್ಮಿ ವರಿಷ್ಠ ಅಶ್ಫಾಕ್ ಪರ್ವೆಜ್ ಕಯಾನಿ ಅವರು ಮಧ್ಯಪ್ರವೇಶಿಸಿಸಬೇಕು ಎಂದು ಮುಷರ್ರಫ್ ತಿಳಿಸಿರುವುದಾಗಿ ಜಿಯೋ ಟಿವಿ ವರದಿ ಹೇಳಿದೆ.
ಪಾಕಿಸ್ತಾನದಲ್ಲಿ ಮಿಲಿಟರಿಗೆ ಸಂವಿಧಾನಾತ್ಮಕವಾದ ಆಡಳಿತದ ಅಧಿಕಾರ ನೀಡಬೇಕು. ದೇಶದ ಆರ್ಥಿಕ ಮತ್ತು ಭದ್ರತೆಗೆ ಉತ್ತಮವಾದ ಆಡಳಿತ ಪಾಕಿಸ್ತಾನಕ್ಕೆ ಬೇಕಾಗಿದೆ ಎಂದು ಲಂಡನ್‌ನಲ್ಲಿ ಬುಧವಾರ ರಾತ್ರಿ ನಡೆದ ಚರ್ಚೆಯ ವೇಳೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಕಯಾನಿ, ಅಧ್ಯಕ್ಷ ಜರ್ದಾರಿ ಹಾಗೂ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ನಡುವೆ ನಡೆದಿರುವ ಮಾತುಕತೆಯ ಹಿನ್ನೆಲೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬಾ ಒಳ್ಳೇದು, ನೀವೇ ಫೋಟೋಗ್ರಾಫ್ಸ್ ಅನ್ನು ನೋಡಿ, ಮಾತುಕತೆಯ ವೇಳೆ ಅಧ್ಯಕ್ಷ, ಪ್ರಧಾನಿ ಅವರು ನಿಜಕ್ಕೂ ವಾತಾವರಣಕ್ಕೆ ಸಂಬಂಧಿಸಿದ ಯಾವುದೇ ಮಾತುಕತೆ ನಡೆಸಿಲ್ಲ. ಅಲ್ಲಿ ಗಂಭೀರವಾದ ಚರ್ಚೆ ನಡೆದಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಮಿಲಿಟರಿ ವರಿಷ್ಠ ಕಯಾನಿ ಅವರು ಅಧ್ಯಕ್ಷ ಮತ್ತು ಪ್ರಧಾನಿ ಬಳಿ ರಾಜಕೀಯ ಬೆಳವಣಿಗೆಯ ಕುರಿತು ಬಲವಾದ ಒತ್ತಡ ಹೇರಿ ಮಾತುಕತೆ ನಡೆಸಿರುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಮುಷರ್ರಫ್ ಅಭಿಪ್ರಾಯವ್ಯಕ್ತಪಡಿಸುವ ಮೂಲಕ, ಪಾಕಿಸ್ತಾನದಲ್ಲಿ ಮತ್ತೆ ಮಿಲಿಟರಿ ಆಡಳಿತ ಬರಲಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.