ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಯೋಧ್ಯೆ ತೀರ್ಪು; ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ, ಪ್ರತಿಭಟನೆ (Ayodhya judgement | Protests in Pakistan | Saeed Kazmi | Babri mosque)
ಅಯೋಧ್ಯೆ ತೀರ್ಪು; ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ, ಪ್ರತಿಭಟನೆ
ಇಸ್ಲಾಮಾಬಾದ್, ಶುಕ್ರವಾರ, 1 ಅಕ್ಟೋಬರ್ 2010( 12:45 IST )
PTI
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಕುರಿತ ವಿವಾದ ಕುರಿತಂತೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಗುರುವಾರ ಐತಿಹಾಸಿಕ ತೀರ್ಪು ನೀಡಿದ್ದ ಬೆನ್ನಲ್ಲೇ, ತೀರ್ಪು ಹಿಂದುಗಳ ಪರವಾಗಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಾಕಿಸ್ತಾನದ ವಿವಿಧೆಡೆ ತೀವ್ರ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಅಯೋಧ್ಯೆ ಕುರಿತ ತೀರ್ಪಿಗೆ ಭಾರತದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಮತ್ತೊಂದೆಡೆ, ಅಯೋಧ್ಯೆ ವಿವಾದ ಕುರಿತಂತೆ ಕೋರ್ಟ್ ಹಿಂದೂಗಳ ಪರವಾಗಿ ತೀರ್ಪು ನೀಡಿದೆ ಎಂದು ಪಾಕಿಸ್ತಾನದ ಧಾರ್ಮಿಕ ಖಾತೆ ಸಚಿವ ಹಮೀದ್ ಸಯೀದ್ ಕಾಜಿಮ್ ಆರೋಪಿಸಿದ್ದಾರೆ.
ವಿವಾದಿತ ಸ್ಥಳವನ್ನು ಹಿಂದೂ ಮತ್ತು ಮುಸ್ಲಿಮರಿಗೆ ಹಂಚಿಕೆ ಮಾಡಿ ತೀರ್ಪು ನೀಡಿರುವುದನ್ನು ವಿರೋಧಿಸಿ ಟ್ರೇಡರ್ಸ್ ಯೂನಿಯನ್ ನೇತೃತ್ವದಲ್ಲಿ ಮುಲ್ತಾನ್ ನಗರದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಕೋರ್ಟ್ ತೀರ್ಪಿನ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ದಕ್ಷಿಣ ನಗರವಾದ ಹೈದರಾಬಾದ್‌ನ ಹೈದರ್ ಚೌಕ್‌ನಲ್ಲಿ ಸುನ್ನಿ ತೆಹ್ರೀಕ್ ಕೂಡ ಪ್ರತಿಭಟನೆ ನಡೆಸಿತು.'ಇದು ಮುಸ್ಲಿಮ್ ವಿರೋಧಿ ತೀರ್ಪು' ಎಂದು ಆಕ್ರೋಶ ವ್ಯಕ್ತಪಡಿಸಿರುವ ಸುನ್ನಿ ತೆಹ್ರೀಕ್ ಸದಸ್ಯರು ಕೋರ್ಟ್ ತೀರ್ಪಿನ್ನು ವಿರೋಧಿಸುವುದಾಗಿ ಘೋಷಣೆ ಕೂಗಿ ಟಯರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
'ಒಂದು ವೇಳೆ ಅಯೋಧ್ಯೆ ಕುರಿತು ಅಲಹಾಬಾದ್‌ನ ಲಕ್ನೋ ಪೀಠ ನೀಡಿರುವ ತೀರ್ಪನ್ನು ಪಾಕಿಸ್ತಾನ ಸರಕಾರ ಒಪ್ಪಿಕೊಂಡರೆ ಈ ಬಗ್ಗೆ ಮತ್ತಷ್ಟು ಪ್ರತಿಭಟನೆ ನಡೆಸುವುದಾಗಿ ತೆಹ್ರೀಕ್ ಸಂಘಟನೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ ಮುಲ್ತಾನ್ ಮತ್ತು ಹೈದರಾಬಾದ್ ನಗರಗಳಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಭಾರತೀಯ ಮುಖಂಡರ ಭಾವಚಿತ್ರಗಳಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
'ಬಾಬರಿ ಮಸೀದಿ ಪ್ರಕರಣದಲ್ಲಿ ಭಾರತೀಯ ಕೋರ್ಟ್ ರಾಜಕೀಯ ತೀರ್ಪು ನೀಡಿದೆ ಎಂದು ಸಚಿವ ಕಾಜಿಮ್ ಆರೋಪಿಸಿದ್ದು, ಇದು ಸಂಪೂರ್ಣವಾಗಿ ಹಿಂದೂ ಸಮುದಾಯದ ಪರವಾಗಿ ಆಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಬರಿ ಮಸೀದಿ ಪ್ರಕರಣದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುವ ರೀತಿಯಲ್ಲಿ ತೀರ್ಪು ನೀಡಿರುವುದನ್ನು ಭಾರತೀಯ ಮುಸ್ಲಿಮರು ವಿರೋಧಿಸಬೇಕೆಂದು ಕಾಜಿಮ್ ಕರೆ ನೀಡಿದ್ದಾರೆ.
ಬಾಬರಿ ಮಸೀದಿ ಇದ್ದ ಸ್ಥಳ ರಾಮನ ಜನ್ಮಸ್ಥಳ ಎಂಬುದಾಗಿ ಕೋರ್ಟ್ ತೀರ್ಪು ನೀಡುವ ಮೂಲಕ, ಮುಸ್ಲಿಮರಿಗೆ ಒಂದು ಭಾಗವನ್ನು ಡೊನೇಷನ್ ರೂಪದಲ್ಲಿ ನೀಡಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ ಎರಡು ಭಾಗ ಹಾಗೂ ಮುಸ್ಲಿಮರಿಗೆ ಒಂದು ಭಾಗ ನೀಡಿ ಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಹಿಂದೂಗಳು ಮತ್ತು ಮುಸ್ಲಿಮರ ಪ್ರಾರ್ಥನೆಯ ವಿಷಯದಲ್ಲಿ ಮತ್ತಷ್ಟು ವಿವಾದ ಹುಟ್ಟುಹಾಕಲಿದೆ. ಆ ನಿಟ್ಟಿನಲ್ಲಿ ಭಾರತೀಯ ಮುಸ್ಲಿಮರು ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕು. ಅಷ್ಟೇ ಅಲ್ಲ ತಮ್ಮ ಹಕ್ಕು ಪಡೆದುಕೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಿ ಪ್ರತಿಭಟನೆಗೆ ಮುಂದಾಗಬೇಕೆಂದು ಕಾಜಿಮ್ ಭಾರತೀಯ ಮುಸ್ಲಿಮರಿಗೆ ಪಿಟಿವಿ ಮೂಲಕ ಸಂದೇಶ ರವಾನಿಸಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ರೀತಿಯಲ್ಲಿ ಅನ್ಯಾಯವಾದರೂ ಕೂಡ ಪಾಕಿಸ್ತಾನ ಅದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸುತ್ತದೆ. ಭಾರತ ಮುಸ್ಲಿಮ್ ಸಮುದಾಯದ ಪರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ. ಈ ತೀರ್ಪಿನಿಂದಾಗಿ ಭಾರತದ ನಿಜವಾದ ಮುಖವಾಡ ಬಯಲಾಗಿದೆ ಎಂದು ಕೆಲವು ಧಾರ್ಮಿಕ ಮುಖಂಡರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.