ಸುಮಾರು ಎರಡು ದಶಕಗಳ ನಂತರ ನಡೆಯುತ್ತಿರುವ ಮ್ಯಾನ್ಮಾರ್‌ನ ಪ್ರಥಮ ಚುನಾವಣೆಯ ನಂತರ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂ ಕೀಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಆಡಳಿತಾರೂಢ ಜುಂಟಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸ್ಯಾನ್ ಸೂ ಕೀಯನ್ನು ಆಡಳಿತಾರೂಢ ಮಿಲಿಟರಿ ಸುಮಾರು 20 ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿತ್ತು. ಇದೀಗ ಆಕೆಯ ಗೃಹಬಂಧನದ ಅವಧಿ ನವೆಂಬರ್ 13ರಂದು ಅಂತ್ಯಗೊಳ್ಳಲಿದ್ದು, ಆಗ ಸೂ ಕೀಯನ್ನು ಬಂಧಮುಕ್ತಗೊಳಿಸಲಾಗುವುದು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ವಿವರಣೆ ನೀಡಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಮ್ಯಾನ್ಮಾರ್‌ನಲ್ಲಿ ಪ್ರಥಮ ಚುನಾವಣೆ ನಡೆಯಲಿದ್ದು, ಮತ್ತೊಂದೆಡೆ ಚುನಾವಣೆ ನಂತರ ಸೂ ಕೀಯನ್ನು ಬಿಡುಗಡೆ ಮಾಡುತ್ತಿರುವುದರಿಂದ ನವೆಂಬರ್ ತಿಂಗಳು ತುಂಬಾ ಮುಖ್ಯವಾಗಲಿದೆ ಎಂದು ಮ್ಯಾನ್ಮಾರ್ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.
ನವೆಂಬರ್ 7ರಂದು ಮ್ಯಾನ್ಮಾರ್‌ನಲ್ಲಿ ಚುನಾವಣೆ ನಡೆಯಲಿದೆ. ನಂತರ ಸೂ ಕೀಯನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.