ಜೋಹಾನ್ಸ್ಬರ್ಗ್, ಶುಕ್ರವಾರ, 1 ಅಕ್ಟೋಬರ್ 2010( 18:50 IST )
ಇಲ್ಲಿನ ಪಬ್‌ವೊಂದರಲ್ಲಿ ಎರಡು ವರ್ಷಗಳ ಹಿಂದೆ ನಾಲ್ಕು ಮಂದಿಯನ್ನು ಹತ್ಯೆಗೈದ ಆರೋಪದ ಮೇಲೆ ಭಾರತೀಯ ಮೂಲದ ಸಹೋದರರಿಬ್ಬರಿಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯ 25 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಪಬ್‌ನ ಶೌಚಾಲಯದಲ್ಲಿ ಶಿಶ್ನದ ಉದ್ದದ ಬಗ್ಗೆ ಟೀಕೆ ಮಾಡಿದ್ದಕ್ಕೆ ಆಕ್ರೋಶಗೊಂಡ ಭಾರತೀಯ ಮೂಲದ ಮಾಜಿ ಪೊಲೀಸ್ ಸಹೋದರರಿಬ್ಬರು ನಿಕ್ ಜಾನ್‌ಸೆನ್ ವಾನ್ ರೆನ್ಸ್‌ಬರ್ಗ್, ರೊರೈ ಮೆಂಜೈಸ್, ಶ್ವಾನ್ ಸ್ಟ್ರೈಡೋಮ್ ಹಾಗೂ ಬ್ರೂಸೆ ಎಡ್ವರ್ಡ್ಸ್ ಅವರನ್ನು ಹತ್ಯೆಗೈದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲುಶಿಕ್ಷೆ ನೀಡಿದೆ.
ಇದೊಂದು ಅತ್ಯಂತ ಕ್ರೂರ ಘಟನೆ ಮತ್ತು ಇದು ಯಾವುದೇ ಹತ್ಯಾಕಾಂಡಕ್ಕಿಂತ ಭಿನ್ನವಾದ ಘಟನೆಯಲ್ಲ ಎಂದು ಡರ್ಬಾನ್ ಹೈಕೋರ್ಟ್ ನ್ಯಾಯಾಧೀಶರಾದ ಗೈಡೋ ಪೆಂಜೋರನ್ ಅಭಿಪ್ರಾಯವ್ಯಕ್ತಪಡಿಸಿ, ಬ್ರಿಯಾನ್‌ಗೆ 25 ವರ್ಷ ಹಾಗೂ ಲೆಯೋನ್ ಸ್ಟೀವನ್‌ಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದ್ದಾರೆ.
ಅಲ್ಲದೇ ಇಬ್ಬರಿಗೂ ಹತ್ಯಾ ಪ್ರಯತ್ನದ ಆರೋಪಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನೂ ನೀಡಿರುವುದಾಗಿ ನ್ಯಾಯಾಧೀಶರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೇವಲ ಪಬ್‌ನಲ್ಲಿ ಶಿಶ್ನದ ವಿಚಾರದಲ್ಲಿ ನಡೆದ ಆಕ್ಷೇಪಕ್ಕೆ ಆಕ್ರೋಶಗೊಂಡ ಸಹೋದರರಿಬ್ಬರು ಪಿಸ್ತೂಲ್‌ನಿಂದ ಗುಂಡು ಹೊಡೆದು ನಾಲ್ವರನ್ನು ಹತ್ಯೆಗೈದಿರುವುದಾಗಿ ವಿಚಾರಣೆ ವೇಳೆ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ವಾದ-ವಿವಾದಗಳನ್ನು ಆಲಿಸಿದ ನಂತರ ಇಬ್ಬರಿಗೂ ಕಠಿಣ ಶಿಕ್ಷೆ ವಿಧಿಸಿದರು.