ಯೂರೋಪ್ ನಗರಗಳ ಮೇಲೆ ಮುಂಬೈ ರೀತಿಯ ದಾಳಿಗಳನ್ನು ಸಂಘಟಿಸಲು ಯೋಜನೆ ರೂಪಿಸಿದ್ದ ಭಯೋತ್ಪಾದಕರ ಸೂತ್ರಧಾರಿ ಮೋಸ್ಟ್ ವಾಂಟೆಡ್ ಒಸಾಮಾ ಬಿನ್ ಲಾಡೆನ್ ಹಾಗೂ ಇದಕ್ಕಾಗಿ ಅಲ್‌ಖೈದಾದ ಜತೆ ಲಷ್ಕರ್ ಇ ತೋಯ್ಬಾ ಮತ್ತು ಹಕಾನಿ ನೆಟ್‌ವರ್ಕ್ ಅವಿರತ ಶ್ರಮವಹಿಸುತ್ತಿವೆ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಗಮ್ಯ ಬುಡಕಟ್ಟು ಪ್ರದೇಶದಲ್ಲಿ ಅಡಗಿದ್ದಾನೆ ಎಂದು ಶಂಕಿಸಲಾಗಿರುವ ಲಾಡೆನ್, ಅಲ್‌ಖೈದಾ ಸಂಘಟನೆಗಳು ಮತ್ತು ಅದರ ಪಾಲುದಾರರಿಗೆ ಏಳು ತಿಂಗಳ ಹಿಂದೆ ವಾಹಕರುಗಳ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದ.
ತಮ್ಮ ಮೂರು ವ್ಯೂಹಾತ್ಮಕ ಗುರಿಗಳಾದ ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್‌ಗಳ ಮೇಲೆ ಮುಂಬೈ ರೀತಿಯ ದಾಳಿಗಳು ನಡೆಯುವುದನ್ನು ನೋಡಲು ನಾನು ಬಯಸುತ್ತಿದ್ದೇನೆ ಎಂದು ಸಂದೇಶ ರವಾನಿಸಿದ್ದ ಎಂದು ಅಮೆರಿಕಾದ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಅಮೆರಿಕಾ ರಾಷ್ಟ್ರೀಯ ಸಾರ್ವಜನಿಕ ರೇಡಿಯೋ ತನ್ನ ವರದಿಯಲ್ಲಿ ಹೇಳಿದೆ.
ರೇಡಿಯೋ ಹೇಳಿರುವ ಪ್ರಕಾರ ಬಂದೂಕುದಾರಿಗಳು ಯೂರೋಪಿನ ಜನನಿಬಿಡ ಪ್ರವಾಸಿ ಸ್ಥಳಗಳಲ್ಲಿ ಗುಂಡಿನ ಮಳೆಗರೆದು, ಹೊಟೇಲುಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ನೂತನ ಮಾದರಿಯ ಅಲ್‌ಖೈದಾ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ.
ಈ ಷಡ್ಯಂತ್ರದಿಂದ ಕಳವಳಗೊಂಡಿರುವ ಪ್ರಸಕ್ತ ಪಾಕಿಸ್ತಾನ ಭೇಟಿಯಲ್ಲಿರುವ ಸಿಐಎ ಮುಖ್ಯಸ್ಥ ಲಿಯಾನ್ ಪೆನೆಟ್ಟಾ, ನವೆಂಬರ್ ತಿಂಗಳಾಂತ್ಯದಲ್ಲಿ ಅಲ್‌ಖೈದಾ ಜತೆ ಸೇರಿ ಇಂತಹ ದಾಳಿಗಳನ್ನು ನಡೆಸಲು ಲಷ್ಕರ್ ಇ ತೋಯ್ಬಾ ಮತ್ತು ಹಕಾನಿ ನೆಟ್‌ವರ್ಕ್ ಸಂಚು ರೂಪಿಸುತ್ತಿದೆ ಎಂದು ಪಾಕ್ ನಾಯಕರುಗಳಿಗೆ ತಿಳಿಸಿದ್ದಾರೆ ಎಂದು ಇಸ್ಲಾಮಾಬಾದ್ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ 'ಡಾನ್' ಪತ್ರಿಕೆ ವರದಿ ಮಾಡಿದೆ.
ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ, ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಮತ್ತು ಮಿಲಿಟರಿ ಮುಖ್ಯಸ್ಥ ಅಶ್ಫಕ್ ಫರ್ವೇಜ್ ಕಯಾನಿಯವರನ್ನು ಭೇಟಿ ಮಾಡಿರುವ ಪೆನೆಟ್ಟಾ, ಈ ದುಷ್ಕೃತ್ಯ ಯೋಜನೆಯ ಹಿಂದೆ ಕನಿಷ್ಠ ಮೂರು ಡಜನ್ ಭಯೋತ್ಪಾದಕರಿದ್ದಾರೆ ಎಂದಿದ್ದಾರೆ.