ಎಲ್‌ಟಿಟಿಇ ವಿರುದ್ಧ ಸಮರದ ಹೀರೋ ಎಂದು ಖ್ಯಾತಿಗಳಿಸಿದ್ದ ಶ್ರೀಲಂಕಾ ಮಿಲಿಟರಿ ಮಾಜಿ ಮುಖ್ಯಸ್ಥ ಸರತ್ ಫೋನ್ಸೆಕಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಂತೂ ಜೈಲುಕಂಬಿಯ ಹಿಂದೆ ಮೊದಲ ದಿನ ಸಿಮೆಂಟ್ ನೆಲದ ಮೇಲೆ ಹಾಸಿಗೆಯಲ್ಲಿ ನಿದ್ದೆಗೆ ಶರಣಾಗಿದ್ದಾರೆ.
ಭ್ರಷ್ಟಚಾರದ ಆರೋಪದಲ್ಲಿ ಫೋನ್ಸೆಕಾ ಇದೀಗ ಜೈಲುಕಂಬಿ ಎಣಿಸುತ್ತಿದ್ದಾರೆ. ಫೋನ್ಸೆಕಾಗೆ ಕೋರ್ಟ್ ಜೈಲುಶಿಕ್ಷೆಗೆ ಶಿಫಾರಸು ಮಾಡಿರುವ ಆದೇಶಕ್ಕೆ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಗುರುವಾರ ಅಧಿಕೃತವಾಗಿ ಅಂಕಿತ ಹಾಕಿದ್ದರು. ನಂತರ ಫೋನ್ಸೆಕಾ ಅವರನ್ನು ಕೈದಿಯನ್ನಾಗಿ ಜೈಲಿನಲ್ಲಿ ಇಡಲಾಗಿದೆ.
ಪೋನ್ಸೆಕಾ ಈಗ ಕೈದಿ ನಂ.0/22032 ಆಗಿದ್ದು, ರಾತ್ರಿ ಸಿಮೆಂಟ್ ನೆಲದಲ್ಲಿ ಹಾಸಿಗೆ ಮೇಲೆ ನಿದ್ರಿಸಿ ಜೈಲು ದಿನಚರಿಯನ್ನು ಆರಂಭಿಸಿರುವುದಾಗಿ ಭಾನುವಾರ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
59ರ ಹರೆಯದ ಮಾಜಿ ವಾರ್ ಹೀರೋ ಫೋನ್ಸೆಕಾ ಅವರನ್ನು ಜೈಲುಕಂಬಿ ಹಿಂದೆ ತಳ್ಳಿರುವ ರಾಜಪಕ್ಸೆ ಕ್ರಮಕ್ಕೆ ಲಂಕಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಕೋರ್ಟ್‌ಮಾರ್ಷಲ್‌ನಲ್ಲಿ ಫೋನ್ಸೆಕಾ ದೋಷಿ ಎಂದು ತೀರ್ಪು ನೀಡಿ 30 ತಿಂಗಳು ಜೈಲುಶಿಕ್ಷೆ ವಿಧಿಸಿತ್ತು.
ಶುಕ್ರವಾರ ಬೆಳಿಗ್ಗೆ 5ಗಂಟೆಗೆ ಎದ್ದ ಫೋನ್ಸೆಕಾ ಟಾಯ್ಲೆಟ್‌ಗೆ ಹೋದಾಗ ನೀರು ಸರಬರಾಜು ತೊಂದರೆ ಇರುವುದನ್ನು ಗಮನಿಸಿ ಆ ಬಗ್ಗೆ ಜೈಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ನಂತರ ಇತರ ಕೈದಿಗಳ ಜೊತೆಗೆ ಒಂದು ಕೈಯಲ್ಲಿ ಮೆಟಲ್ ಜಗ್, ಮತ್ತೊಂದು ಕೈಯಲ್ಲಿ ಮೆಟಲ್ ಪ್ಲೇಟ್ ಹಿಡಿದು ಸರದಿಯಲ್ಲಿ ನಿಂತು ಬೆಳಗ್ಗಿನ ಉಪಹಾರ ಪಡೆದರು.
ಮಧ್ಯಾಹ್ನ ಕೂಡ ಕೈದಿಗಳ ಸಾಲಿನಲ್ಲಿ ನಿಂತು ಅನ್ನ, ಸಾಂಬಾರು, ದಾಲ್ ಹಾಗೂ ವೆಜಿಟೇಬಲ್ ಮೆಲ್ಲುನ್, ಮೀನು, ಗ್ರೇವಿಯ ಊಟದ ನಂತರ 2ಗಂಟೆಗೆ ಜೈಲುಕೋಣೆಗೆ ವಾಪಸ್. ನಂತರ ಮತ್ತೆ ಜೈಲು ಆವರಣದಲ್ಲಿ ತಿರುಗಾಟ, 7ಗಂಟೆಗೆ ಸೆಲ್‌ಗೆ ವಾಪಸ್. ಜೈಲು ಕೋಣೆಯ ದೀಪ ಆರಿಸಿದ ನಂತರ ನಿದ್ರೆ. ಮತ್ತೆ ಬೆಳಗಿನ ಕಾರ್ಯ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.