ಇಸ್ಲಾಮಾಬಾದ್, ಮಂಗಳವಾರ, 5 ಅಕ್ಟೋಬರ್ 2010( 18:12 IST )
ಮುಂಬೈ ಮೇಲೆ ಭಯೋತ್ಪಾದನೆ ದಾಳಿ ನಡೆದು ಎರಡು ವರ್ಷ ಸಮೀಪಿಸುತ್ತಿದ್ದರೂ ಕೂಡ ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಇ ತೊಯ್ಬಾದ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿ ವಿರುದ್ಧ ಬಲವಾದ ಸಾಕ್ಷ್ಯ ಒದಗಿಸಲು ಪಾಕಿಸ್ತಾನದ ಪ್ರಾಸಿಕ್ಯೂಟರ್ ವಿಫಲರಾಗಿರುವುದಾಗಿ ಲಖ್ವಿ ಪರ ವಕೀಲರೊಬ್ಬರು ತಿಳಿಸಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಘಟನೆ ಬಗ್ಗೆ ಅಮೆರಿಕದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ನಡೆಸಿತ್ತು. ನಂತರ ಲಖ್ವಿಯನ್ನು ಬಂಧಿಸಿತ್ತು. ಆದರೆ ಪಾಕಿಸ್ತಾನ ಆತನ ಬಗ್ಗೆ ಬಲವಾದ ಪುರಾವೆ ಒದಗಿಸಲು ವಿಫಲವಾಗಿರುವುದಾಗಿ ವಕೀಲ ಶಾಹಬಾಜ್ ಅಹ್ಮದ್ ಜಾನ್‌ಜುವಾ ರಾವಲ್ಪಿಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಮುಂಬೈ ದಾಳಿ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಲಖ್ವಿ ಹಾಗೂ ಇತರ ಆರು ಮಂದಿಯ ವಿಚಾರಣೆಯಲ್ಲಿ ಪಾಕ್ ಭಯೋತ್ಪಾದನಾ ನಿಗ್ರಹ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಪ್ರಕರಣದ ಕುರಿತು ಎಫ್ಐಎ ನಾಲ್ಕು ಬಾರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆ ನಿಟ್ಟಿನಲ್ಲಿ ಎಫ್ಐಎ ಅನಾವಶ್ಯಕವಾಗಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿರುವ ಶಾಹಬಾಜ್, ಶಂಕಿತರ ವಿಚಾರಣೆಗಾಗಿ ಎಫ್ಐಎ ಮತ್ತೆ ಅರ್ಜಿಯೊಂದನ್ನು ಸಲ್ಲಿಸಿದೆ ಎಂದರು.
ಅಲ್ಲದೆ, ಮುಂಬೈ ದಾಳಿಯಲ್ಲಿ ಬಲಿಪಶುವಾದವರ ಶವಪರೀಕ್ಷೆಯನ್ನು ಭಾರತದ ಯಾವ ವೈದ್ಯರು ಮಾಡಿದ್ದಾರೆ ಮತ್ತು ಗಾಯಾಳುಗಳಿಗೆ ಯಾರು ಚಿಕಿತ್ಸೆ ನೀಡಿದ್ದಾರೆ ಎಂಬ ಬಗ್ಗೆ ಎಫ್ಐಎ ಈವರೆಗೂ ಹೇಳಿಕೆ ಪ್ರತಿಯನ್ನು ಕೊಟ್ಟಿಲ್ಲ ಎಂದು ದೂರಿದರು.