ಉಗ್ರರಿಗೆ ತರಬೇತಿ-ಮುಷ್ ಹೇಳಿಕೆಗೆ ಆಧಾರವಿಲ್ಲ: ಪಾಕಿಸ್ತಾನ
ಇಸ್ಲಾಮಾಬಾದ್, ಬುಧವಾರ, 6 ಅಕ್ಟೋಬರ್ 2010( 15:14 IST )
ಭಾರತದ ವಿರುದ್ಧ ಹೋರಾಡಲು ಭೂಗತ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನ ತರಬೇತಿ ನೀಡಿರುವುದು ನಿಜ ಎಂದು ಪಾಕಿಸ್ತಾನ ಮಿಲಿಟರಿ ಮಾಜಿ ಮುಖ್ಯಸ್ಥ ಪರ್ವೆಜ್ ಮುಷರ್ರಫ್ ನೀಡಿರುವ ಹೇಳಿಕೆಗೆ ಪಾಕಿಸ್ತಾನ ತೀವ್ರ ಕಿಡಿಕಾರಿದ್ದು, ಇದೊಂದು ಆಧಾರರಹಿತ ಆರೋಪ ಎಂದು ತಿಳಿಸಿದೆ.
ನಿಜಕ್ಕೂ ಮುಷರ್ರಫ್ ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ, ಯಾಕೆಂದರೆ ಅವರೀಗ ಪಾಕಿಸ್ತಾನದಲ್ಲಿ ಇಲ್ಲ. ಯಾವ ಉದ್ದೇಶದಲ್ಲಿ ಆ ಮಾತನ್ನು ಹೇಳಿದ್ದಾರೆಂಬುದು ಕೂಡ ತಿಳಿದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್ ಬಾಸಿಟ್ ವಿವರಿಸಿದ್ದಾರೆ.
ಆದರೆ ಕಾಶ್ಮೀರದಲ್ಲಿ ಭೂಗತ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನ ತರಬೇತಿ ನೀಡಿದೆ ಎಂಬ ಮುಷ್ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ಆಧಾರರಹಿತ ಆರೋಪ ಎಂದು ತಿಳಿಸಿರುವುದಾಗಿ ಚಾನೆಲ್‌ವೊಂದರ ವರದಿ ಹೇಳಿದೆ.
ಅಲ್ಲದೆ, ಪಾಕಿಸ್ತಾನ ವಿಶ್ವಸಂಸ್ಥೆ ನಿಯಮ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅನ್ವಯ ಕಾಶ್ಮೀರ ಜನರ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಿರುವುದಾಗಿ ಪುನರುಚ್ಚರಿಸಿದರು.
ಪಾಕಿಸ್ತಾನದ ಮಿಲಿಟರಿಯ ಮಾಜಿ ಆಡಳಿತಗಾರ ಮುಷರ್ರಫ್ ಅವರು, ಭಾರತದ ವಿರುದ್ಧ ಹೋರಾಡಲು ಪಾಕಿಸ್ತಾನ ಭೂಗತ ಉಗ್ರಗಾಮಿ ಸಂಘಟನೆಗಳಿಗೆ ತರಬೇತಿ ನೀಡಿರುವುದು ಹೌದೆಂದು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಆ ನಿಟ್ಟಿನಲ್ಲಿ ದೇಶದ ಉನ್ನತ ಮಟ್ಟದ ನಾಯಕ ಮೊದಲ ಬಾರಿಗೆ ಇಂತಹ ತಪ್ಪನ್ನು ಒಪ್ಪಿಕೊಂಡಿರುವುದಾಗಿತ್ತು. ಈ ಹೇಳಿಕೆಯಿಂದ ಪಾಕಿಸ್ತಾನ ಇಕ್ಕಟ್ಟಿಗೆ ಸಿಲುಕಿದಂತಾಗಿತ್ತು.