ರಾವಲ್ಪಿಂಡಿಯಲ್ಲಿನ ಹಿಂದೂ ದೇವಾಲಯವನ್ನು ಒಡೆದು ಹಾಕಿರುವ ಪ್ರಕರಣದ ಕುರಿತು ಸತ್ಯಾಂಶ ಪತ್ತೆ ಹಚ್ಚಲು ರಚಿಸಿರುವ ಆಯೋಗ ವರದಿ ನೀಡುವುದನ್ನು ವಿಳಂಬ ಮಾಡಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯ ಎಚ್ಚರಿಕೆ ನೀಡಿದೆ.
ರಾವಲ್ಪಿಂಡಿಯ ಶಂಶಾನ್ ಘಾಟ್(ರುದ್ರಭೂಮಿ) ಸಮೀಪದಲ್ಲಿನ ಹಿಂದೂ ದೇವಾಲಯವನ್ನು ಭಾಗಶಃ ಒಡೆದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜಾಂಶ ಪತ್ತೆ ಮಾಡುವಲ್ಲಿ ಪಾಕ್ ಸರಕಾರ ವಿಫಲವಾಗಿದೆ. ಘಟನೆ ನಡೆದು ಎರಡು ತಿಂಗಳು ಕಳೆದರೂ ಕೂಡ ಆಯೋಗ ವರದಿಯನ್ನೂ ನೀಡಿಲ್ಲ ಎಂದು ಪಾಕಿಸ್ತಾನ ಹಿಂದೂ ಸಿಕ್ ಸಾಮಾಜಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜಗ್ ಮೋಹನ್ ಕುಮಾರ್ ಆರೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಧ್ವಂಸ ಘಟನೆ ಕುರಿತು ಆಯೋಗ ಅಕ್ಟೋಬರ್ 30ರೊಳಗೆ ವರದಿಯನ್ನು ಅಂತಿಮಗೊಳಿಸದಿದ್ದಲ್ಲಿ, ಸರಕಾರದ ವಿರುದ್ಧ ಹಿಂದೂ ಸಮುದಾಯ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಆರೋರಾ ಸುದ್ದಿಗಾರರೊಂದಿಗೆ ಮಾತನಾಡುತ್ತ ಎಚ್ಚರಿಸಿದ್ದಾರೆ.