ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರನ್ನು ನ್ಯೂಜಿಲೆಂಡ್ ಟಿವಿ ನಿರೂಪಕನೊಬ್ಬ ಅಪಹಾಸ್ಯ ಮಾಡಿದ್ದಾನೆ. ಇದೆಂತಹ ಹೆಸರು, 'ಡಿಕ್-ಶಿಟ್' ಎಂದು ಹೇಳುವ ಮೂಲಕ ಅಪಮಾನ ಮಾಡಿದ್ದಾನೆ. ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿಗಳು ಹೇಳಿವೆ.
ನ್ಯೂಜಿಲೆಂಡ್‌ನ ಟಿವಿಎನ್‌ಜೆಡ್ ಚಾನೆಲ್‌ನ ಖ್ಯಾತ ನಿರೂಪಕ ಪೌಲ್ ಹೆನ್ರಿ ಎಂಬಾತನೇ ಈ ರೀತಿ ಅಪಮಾನ ಎಸಗಿರುವುದು. ಕಾರ್ಯಕ್ರಮವೊಂದರ ನಿರೂಪನೆ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿಯವರ ಹೆಸರನ್ನು ಉಲ್ಲೇಖಿಸುತ್ತಾ, ಇದೆಂತಹ ಹೆಸರು ಎಂದು ಪ್ರಶ್ನಿಸುತ್ತಾನೆ.
ಬೆನ್ನಿಗೆ, ಆಕೆ ಭಾರತೀಯಳಾಗಿರುವುದರಿಂದ 'ಡಿಕ್-ಶಿಟ್' (Dik-shit) ಹೆಚ್ಚು ಸೂಕ್ತವಾಗಿದೆ ಎಂದು ಜನಾಂಗೀಯ ಅಪಮಾನವನ್ನೂ ಎಸಗಿದ್ದಾನೆ. ಕಾಮನ್‌ವೆಲ್ತ್ ಗೇಮ್ಸ್ ಕುರಿತ ವರದಿಯಲ್ಲಿ ಈ ರೀತಿಯಾಗಿ ವರ್ಣದ್ವೇಷದ ಮಾತುಗಳನ್ನಾಡಲಾಗಿದೆ.
ಈ ವೀಡಿಯೋವನ್ನು ವಾಹಿನಿಯ ವೆಬ್‌ಸೈಟಿನಲ್ಲಿ ಹಾಕಲಾಗಿತ್ತು. ಅದಕ್ಕೆ ಕೊಟ್ಟಿರುವ ಶೀರ್ಷಿಕೆ 'ದೀಕ್ಷಿತ್ ಹೆಸರಿಗೆ ನಕ್ಕ ಪೌಲ್ ಹೆನ್ರಿ'.
ಈ ನಿರೂಪಕ ಹೆನ್ರಿ ಇತ್ತೀಚೆಗಷ್ಟೇ ಇದೇ ರೀತಿಯ ಮಾತುಗಳನ್ನಾಡಿ ಅಮಾನತುಗೊಂಡಿದ್ದ. ನ್ಯೂಜಿಲೆಂಡ್‌ನ ಭಾರತೀಯ ಮೂಲದ ಗವರ್ನರ್ ಜನರಲ್ ಸರ್ ಆನಂದ್ ಸತ್ಯಾನಂದ್ ಅವರ ಬಗ್ಗೆ ಜನಾಂಗೀಯ ಮಾತುಗಳನ್ನಾಡಿ ಈ ಶಿಕ್ಷೆಗೆ ಗುರಿಯಾಗಿದ್ದ. ಅದರ ಬೆನ್ನಿಗೆ ಚಾನೆಲ್ ಮತ್ತೊಂದು ಆಧ್ವಾನಕ್ಕೆ ಮುಂದಾಗಿದೆ.