ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶೇಷ ದಿನ: 10-10-2010ಕ್ಕೆ ಸಿಡ್ನಿಯಲ್ಲಿ ನೂರು ಜೋಡಿ ಹಸೆಮಣೆಗೆ! (Marry on 10/10/10 | Sydney | Newcastle | numerology | registry offices)
ವಿಶೇಷ ದಿನ: 10-10-2010ಕ್ಕೆ ಸಿಡ್ನಿಯಲ್ಲಿ ನೂರು ಜೋಡಿ ಹಸೆಮಣೆಗೆ!
ಸಿಡ್ನಿ, ಗುರುವಾರ, 7 ಅಕ್ಟೋಬರ್ 2010( 15:27 IST )
ಜೋತಿಷ್ಯ, ವಾಸ್ತುಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರದ ಬಗ್ಗೆಯೂ ಜನರಿಗೆ ಸಾಕಷ್ಟು ನಂಬಿಕೆ. ಆ ಕಾರಣಕ್ಕಾಗಿಯೇ 10-10-2010ರಂದು ಸಿಡ್ನಿಯಲ್ಲಿ ಸುಮಾರು ನೂರಕ್ಕೂ ಅಧಿಕ ಪ್ರೇಮಿಗಳ ಜೋಡಿ ವಿವಾಹಬಂಧನಕ್ಕೆ ಒಳಗಾಗಲು ನಿರ್ಧರಿಸಿದ್ದಾರೆ. ಈ ಅಪರೂಪದ ದಿನಾಂಕ ಪ್ರತಿ ನೂರು ವರ್ಷಗಳಿಗೊಮ್ಮೆ ಬರುತ್ತದೆ.
ದಾಖಲೆ ಎಂಬಂತೆ 106 ಜೋಡಿಗಳು ಭಾನುವಾರ (10-10-2010) ಲಗ್ನವಾಗಲು ವಿವಾಹ ನೋಂದಣಿ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲ ಸಿಡ್ನಿಯಲ್ಲಿನ ನ್ಯೂಕ್ಯಾಸ್ಟೆಲ್ ಮತ್ತು ಪಾರ್ರಮಾಟ್ಟಾದ ಜನನ-ಮರಣ ಮತ್ತು ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹವಾಗಲಿದ್ದಾರೆ.
ಸುಮಾರು ನೂರು ವರ್ಷಗಳಿಗೊಮ್ಮೆ ಬರಲಿರುವ ಇಂತಹ ವಿಶೇಷ ದಿನಾಂಕದಂದು ಜೋಡಿಗಳು ವಿವಾಹ ಬಂಧನಕ್ಕೊಳಗಾಗಲು ಮುಂದಾಗುತ್ತಾರೆ ಎಂದು ಎನ್‌ಎಸ್‌ಡಬ್ಲ್ಯು ಅಟಾರ್ನಿ ಜನರಲ್ ಜಾನ್ ಹಾಟ್ಜಿಸ್ಟ್ರೇಗಾಸ್ ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ವಿವಾಹ ನೋಂದಣಿ ಕಚೇರಿಯಲ್ಲಿನ ಬಿಡುವಿಲ್ಲದ ದಿನ ಇದಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಶೇಷ ದಿನದಲ್ಲಿನ ವಿವಾಹ ಮಾಡಿಕೊಳ್ಳುವ ಸಲುವಾಗಿಯೇ ಕಳೆದ ವರ್ಷವೇ ನೋಂದಣಿ ಮಾಡಿಕೊಳ್ಳಲು ಆರಂಭಿಸಿದ್ದರು ಎಂದು ಜಾನ್ ತಿಳಿಸಿದ್ದಾರೆ. 08-08-2008ರಲ್ಲಿ 96 ಜೋಡಿಗಳು ವಿವಾಹ ಮಾಡಿಕೊಂಡಿದ್ದು, ಆ ಸಂದರ್ಭ ಇದ್ದ ಬೇಡಿಕೆಗಿಂತ ಈ ಬಾರಿ ಹೆಚ್ಚಿನ ಜೋಡಿಗಳು ವಿವಾಹವಾಗಲು ಮುಂದಾಗಿದ್ದಾರೆ ಎಂದರು.
35 ಜೋಡಿಗಳು ಪಾರ್ರಾಮಾಟ್ಟಾದಲ್ಲಿ, 65 ಜೋಡಿಗಳು ಚಿಪ್ಪೆಂಡಾಲೆ ಹಾಗೂ ಆರು ಜೋಡಿ ನ್ಯೂಕ್ಯಾಸ್ಟೆಲ್ ವಿವಾಹ ನೋಂದಣಿ ಕಚೇರಿಯಲ್ಲಿ 10-10-2010ರ ಬೆಳಿಗ್ಗೆ 10 ಗಂಟೆ ಮತ್ತು 10ಗಂಟೆ 10 ನಿಮಿಷಕ್ಕೆ ವಿವಾಹವಾಗಲಿದ್ದಾರೆ.
ಸಂಖ್ಯಾಶಾಸ್ತ್ರದ ವೆಬ್‌ಸೈಟ್ ಪ್ರಕಾರ, 10-10-2010ರಂದು ಮದುವೆಯಾಗುವ ಮೂಲಕ ಹೊಸ ಜೀವನ, ಸ್ವಾತಂತ್ರ್ಯ ಮತ್ತು ಸ್ವ ಇಚ್ಛೆಯ ಸ್ವಂತಿಕೆ ಬದುಕು ರೂಪಿಸಿಕೊಳ್ಳಲು ಪ್ರಸಕ್ತವಾದದ್ದು ಎಂದು ವಿಶ್ಲೇಷಿಸಿದೆ.