ಕಾಶ್ಮೀರ ವಿವಾದ;ಭಾರತ-ಪಾಕ್ ಒಪ್ಪಿದ್ರೆ ಮಧ್ಯಸ್ಥಿಕೆ: ವಿಶ್ವಸಂಸ್ಥೆ
ಯುನೈಟೆಡ್ ನೇಷನ್ಸ್, ಗುರುವಾರ, 7 ಅಕ್ಟೋಬರ್ 2010( 16:09 IST )
ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ಕಾಶ್ಮೀರ ವಿವಾದ ಬಗೆಹರಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿ ಮನವಿ ಮಾಡಿಕೊಂಡಲ್ಲಿ ಮಾತ್ರ ವಿಶ್ವಸಂಸ್ಥೆ ಆ ಕೆಲಸಕ್ಕೆ ಮುಂದಾಗುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಗುರುವಾರ ತಿಳಿಸಿದ್ದಾರೆ.
ಉಭಯ ದೇಶಗಳು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಲ್ಲಿ ಮನವಿ ಮಾಡಿಕೊಂಡರೆ ವಿಶ್ವಸಂಸ್ಥೆ ವಿವಾದ ಬಗೆಹರಿಕೆ ಬಗ್ಗೆ ಪ್ರಾಥಮಿಕವಾಗಿ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಭಾರತ ಮತ್ತು ಪಾಕಿಸ್ತಾನ ನೆರೆಯ ದೇಶಗಳಾಗಿವೆ. ಅಲ್ಲದೇ ಅವೆರಡೂ ಪ್ರಮುಖ ದೇಶಗಳೂ ಹೌದು. ಹಾಗಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳಲು ಎರಡೂ ದೇಶಗಳು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಕಳೆದ ಜೂನ್ ತಿಂಗಳಿನಿಂದ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆಯುವ ಮೂಲಕ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಆ ನಿಟ್ಟಿನಲ್ಲಿ ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಾನು ಸಂತಾಪ ವ್ಯಕ್ತಪಡಿಸುವುದಾಗಿ ಮೂನ್ ಹೇಳಿದರು. ಹಾಗಾಗಿ ಎಲ್ಲಾ ರೀತಿಯಿಂದಲೂ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ನಿಲ್ಲಿಸಬೇಕೆಂದು ಕರೆ ನೀಡುತ್ತೇನೆ ಎಂದರು.