ಮಾಹಿತಿ ಕಲೆ ಹಾಕಲು ಪೊಲೀಸರಿಗೆ ಕಂಪ್ಯೂಟರ್ ಪಾಸ್‌ವರ್ಡ್ ನೀಡದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ 19ರ ಹರೆಯದ ಯುವಕನೊಬ್ಬನಿಗೆ ನಾಲ್ಕು ತಿಂಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಅಪ್ರಾಪ್ತ ಲೈಂಗಿಕ ಚಟುವಟಿಕೆಗಾಗಿ ಉಪಯೋಗಿಸುತ್ತಿದ್ದ ಪರಿಣಾಮ ಓಲಿವರ್ ಡ್ರ್ಯಾಗೆಸ್ ಕಂಪ್ಯೂಟರ್ ಅನ್ನು ಚೈಲ್ಡ್ ಪ್ರೊಟೆಕ್ಷನ್ ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಕಂಪ್ಯೂಟರಿನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಹೊರತೆಗೆಯಲು ಪೊಲೀಸರಿಗೆ ಅಸಾಧ್ಯವಾಗಿತ್ತು. ಯಾಕೆಂದರೆ ಅದಕ್ಕೆ 50ಕ್ಯಾರೆಕ್ಟರ್‌ನ ಪಾಸ್‌ವರ್ಡ್ ಅನ್ನು ಯುವಕ ಬಳಕೆ ಮಾಡುತ್ತಿದ್ದ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಫಾಸ್ಟ್ ಫುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 19ರ ಹರೆಯದ ಬಾಲಕನನ್ನು ಈ ಆರೋಪದ ಮೇಲೆ ಕಳೆದ ವರ್ಷವೇ ಬಂಧಿಸಲಾಗಿತ್ತು. ಆದರೆ ಆತ ಪಾಸ್‌ವರ್ಡ್ ನೀಡುವುದಾಗಿ ಪೊಲೀಸರಿಗೆ ಭರವಸೆ ನೀಡಿದ್ದ. ಕೊನೆಗೂ ಆತ ಪಾಸ್‌ವರ್ಡ್ ಕೊಡದೆ ಇದ್ದ ಪರಿಣಾಮ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೆ ರೆಗ್ಯುಲೇಷನ್ ಆಫ್ ಇನ್ವೆಸ್ಟಿಗೇಟರಿ ಪವರ್ ಆಕ್ಟ್ 2000 ಅನ್ವಯ ನಾಲ್ಕು ತಿಂಗಳ ಕಾಲ ಜೈಲುಶಿಕ್ಷೆ ನೀಡಿದೆ.