ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುತ್ತಿರುವ ಹಿಂದಿನ ಹಲವು ಮುಖಗಳು ದಿನದಿಂದ ದಿನಕ್ಕೆ ಬಯಲಾಗುತ್ತಿದ್ದು, ಅಮೆರಿಕಾ ಕೂಡ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುವತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಅದಕ್ಕೆ ಮತ್ತೊಂದು ಸೇರ್ಪಡೆಯೆಂಬಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಅಫಘಾನಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದು ಬಹಿರಂಗವಾಗಿದೆ.
ಅಮೆರಿಕಾ ಪಡೆಗಳು ಸೇರಿದಂತೆ ಅಂತಾರಾಷ್ಟ್ರೀಯ ಪಡೆಗಳ ಪ್ರತಿಯೊಬ್ಬರನ್ನೂ ಕೊಂದು ಹಾಕಿ ಎಂದು ತಾಲಿಬಾನ್ ಕಮಾಂಡರುಗಳಿಗೆ ಐಎಸ್ಐ ಒತ್ತಡ ಹೇರುತ್ತಿದೆ. ಅದರ ಪ್ರಮುಖ ಉದ್ದೇಶ ಶಾಂತಿ ಒಪ್ಪಂದ ನಡೆಯಬೇಕಿದ್ದರೆ ಅದರಲ್ಲಿ ಇಸ್ಲಾಮಾಬಾದಿನದ್ದು ಪ್ರಮುಖ ಪಾತ್ರವಿರಬೇಕು ಎನ್ನುವುದು ಎಂದು ಮಾಧ್ಯಮ ವರದಿಗಳು ಹೇಳಿವೆ.
ಐಎಸ್ಐ ನೀಡುವ ನಿರ್ದೇಶನಗಳು, ಆದೇಶಗಳನ್ನು ಪಾಲಿಸದ ತಾಲಿಬಾನ್ ಕಮಾಂಡರುಗಳನ್ನು ಬಂಧಿಸಲು ಐಎಸ್ಐ ಬಯಸುತ್ತಿದೆ. ಪೊಲೀಸರು, ಯೋಧರು, ಇಂಜಿನಿಯರುಗಳು, ಶಿಕ್ಷಕರು, ನಾಗರಿಕರು ಸೇರಿದಂತೆ ಪ್ರತಿಯೊಬ್ಬರನ್ನೂ ಕೊಲ್ಲಬೇಕು ಎನ್ನುವುದು ಐಎಸ್ಐ ಬಯಕೆ ಎಂದು ಅಫಘಾನಿಸ್ತಾನದ ಕುನಾರ್ ಪ್ರಾಂತ್ಯದ ತಾಲಿಬಾನ್ ಕಮಾಂಡರ್ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ.
ಅಮೆರಿಕಾ ಅಧಿಕಾರಿಗಳು ಮತ್ತು ಅಫ್ಘಾನ್ ಉಗ್ರರ ಹೇಳಿಕೆಗಳನ್ನು ಉಲ್ಲೇಖಿಸಿರುವ ವರದಿಯು, ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಅಮೆರಿಕಾ ಮತ್ತು ಇತರ ಅಂತಾರಾಷ್ಟ್ರೀಯ ಪಡೆಗಳ ಸದಸ್ಯರನ್ನು ಕೊಂದು ಹಾಕುವಂತೆ ತಾಲಿಬಾನ್ ಫೀಲ್ಡ್ ಕಮಾಂಡರುಗಳ ಮೇಲೆ ಐಎಸ್ಐ ಒತ್ತಡ ಹೇರುತ್ತಿದೆ ಎಂದಿದೆ.
ಪಾಕಿಸ್ತಾನದ ಮೇಲೆ ಅಮೆರಿಕಾ ಮಾಡಿರುವ ಇತ್ತೀಚಿನ ಆರೋಪದ ಸರಣಿಗಳಲ್ಲೇ ಇದು ಅತ್ಯಂತ ಗಂಭೀರವಾದದ್ದು ಮತ್ತು ಅಫಘಾನಿಸ್ತಾನ ಹೋರಾಟದ ಪ್ರಮುಖ ಪಾಲುದಾರ ರಾಷ್ಟ್ರದ ಜತೆಗಿನ ಸಂಬಂಧ ಕೆಡುತ್ತಿರುವುದನ್ನು ಇದು ತೋರಿಸುತ್ತಿದೆ ಎಂದು ಪತ್ರಿಕೆ ವಿವರಣೆ ನೀಡಿದೆ.
ಆದರೆ ಆರೋಪವನ್ನು ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಳ್ಳಿ ಹಾಕಿದ್ದಾರೆ.
ಅಫಘಾನಿಸ್ತಾನದಲ್ಲಿ ಏನೇ ಪ್ರಮಾದಗಳು ನಡೆದರೂ, ಅದಕ್ಕೆ ಐಎಸ್ಐ ಕಾರಣ ಎಂದು ಗೂಬೆ ಕೂರಿಸಲಾಗುತ್ತದೆ. ಅವರು ಅಪಘಾನಿಸ್ತಾನದಲ್ಲಿ ನಡೆಯುವ ಎಲ್ಲಾ ದುಷ್ಕೃತ್ಯಗಳಲ್ಲೂ ಐಎಸ್ಐ ಏಜೆಂಟ್‌ಗಳನ್ನು ಕಾಣುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕಾವು ಅಫಘಾನಿಸ್ತಾನವನ್ನು ತೊರೆದು ಹೋದ ನಂತರ ತನ್ನ ನಿಯಂತ್ರಣವನ್ನು ಮುಂದುವರಿಸುವುದು ಮತ್ತು ಯುದ್ಧ ಸಂತ್ರಸ್ತ ರಾಷ್ಟ್ರದ ವ್ಯವಹಾರಗಳಲ್ಲಿ ಭಾರತದ ಮಧ್ಯಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನವು ಐಎಸ್ಐ ಮೂಲಕ ಭಯೋತ್ಪಾದಕರ ಜತೆ ಸ್ನೇಹಪರ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.