ಭಾರತೀಯ ದಂಪತಿಗಳನ್ನು 2008ರಲ್ಲಿ ಮಿಚಿಗನ್‌ನಲ್ಲಿ ಹತ್ಯೆಗೈದ ಪ್ರಕರಣದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಇಲ್ಲಿನ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಿಚಿಗನ್ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಗೆರ್ಲಾಡ್ ರೋಸೆನ್ ಅವರು, ಭಾರತೀಯ ಮೂಲದ ಅಶಾನ್ ಮತ್ತು ಬ್ರಿಜಿ ಚಾಡ್‌ಬ್ರಾ ದಂಪತಿಗಳನ್ನು ಕೊಂದ ಆರೋಪಿ ನಾರಾಯನ್ ಥಾಡಾನಿ(63)ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ಮತ್ತೊಬ್ಬ ಸಹ ಆರೋಪಿ ಡೌಗ್ಲಾಸ್ ಟೋಬಾರ್(42)ಗೆ ಕೂಡ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕೊಲೆ ಪ್ರಕರಣದಲ್ಲಿ ಸಹಕಾರ ನೀಡಿದ್ದಕ್ಕೆ ಟೋಬಾರ್ 30 ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕು ಎಂದು ಅಮೆರಿಕದ ಅಟಾರ್ನಿ ಬಾರ್ಬರಾ ಮೆಕ್ವೆಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಥಾಡಾನಿ ತಾನು ಕೊಲೆ ಆರೋಪದಲ್ಲಿ ಶಾಮೀಲಾಗಿರುವುದಾಗಿ ಜೂನ್ ತಿಂಗಳಲ್ಲಿ ತಪ್ಪೊಪ್ಪಿಕೊಂಡಿದ್ದ. ಚಾಡ್‌ಬ್ರಾ ದಂಪತಿಗಳನ್ನು 2008 ಮಾರ್ಚ್ 11ರಂದು ಕೊಲೆಗೈಯಲಾಗಿತ್ತು ಎಂದು ಅಟಾರ್ನಿ ವಿವರಿಸಿದ್ದಾರೆ.