ಪ್ರಜಾಪ್ರಭುತ್ವ ಬೇಕೆಂದು ಹಲವು ವರ್ಷಗಳ ಕಾಲ ಹೋರಾಡಿ ಜೈಲು ಸೇರಿರುವ ಚೀನಾದ ಲಿಯೂ ಕ್ಸಿಯಾಬೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ. ಅದರ ಬೆನ್ನಿಗೆ ಕ್ಸಿಯಾಬೊ ಅವರನ್ನು ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಚೀನಾ ತೀವ್ರವಾಗಿ ಟೀಕಿಸಿದೆ.
ಚೀನಾದಲ್ಲಿ ಅಹಿಂಸಾ ಮಾರ್ಗದಲ್ಲಿ ಮೂಲಭೂತ ಮಾನವ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿರುವ ಕ್ಸಿಯಾಬೊ ಅವರನ್ನು ನಾರ್ವಿಯನ್ ನೊಬಲ್ ಸಮಿತಿಯು ಪ್ರಶಂಸಿಸಿದೆ. ಶಾಂತಿ ಮತ್ತು ಮಾನವ ಹಕ್ಕುಗಳ ನಡುವೆ ಆಪ್ತ ಸಂಬಂಧವಿದೆ ಎಂದು ಸಮಿತಿ ನಂಬಿಕೊಂಡು ಬಂದಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಾಗತಿಕ ವೇದಿಕೆಯಲ್ಲಿ ಚೀನಾವು ಪ್ರಮುಖ ಪಾತ್ರವನ್ನು ಬಯಸುತ್ತಿರುವ ಹೊತ್ತಿನಲ್ಲೇ ಮಾನವ ಹಕ್ಕುಗಳ ವಿಚಾರವು ನೊಬೆಲ್ ಪ್ರಶಸ್ತಿಯೊಂದಿಗೆ ಎಲ್ಲರ ಗಮನವನ್ನು ಸೆಳೆದಿದೆ.
ರಾಷ್ಟ್ರದ ಶಕ್ತಿಯನ್ನು ಬುಡಮೇಲು ಮಾಡಿದ ಆರೋಪದ ಮೇಲೆ ಅವರಿಗೆ ಕಳೆದ ವರ್ಷದ ಡಿಸೆಂಬರ್‌ನಿಂದ 11 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅದಕ್ಕೂ ಮೊದಲು ಅವರನ್ನು 'ಚಾರ್ಟರ್ 8' ಆರೋಪದ ಮೇಲೆ ಬಂಧಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುಪಕ್ಷೀಯ ಚುನಾವಣೆಗಳನ್ನು ಒತ್ತಾಯಿಸಿ ಬುದ್ಧಿಜೀವಿಗಳು ತಯಾರಿಸಿದ್ದ 'ಚಾರ್ಟರ್ 8' ಎಂಬ ಪ್ರಣಾಳಿಕೆಯಲ್ಲಿ ಕೂಡ ಪಾಲ್ಗೊಂಡಿದ್ದರು ಎಂದು 2009ರ ಜುಲೈಯಲ್ಲೇ ಕ್ಸಿಯಾಬೊರನ್ನು ಬಂಧಿಸಲಾಗಿತ್ತು.
ಅದಕ್ಕೂ ಮೊದಲು ಹಲವಾರು ಪ್ರಗತಿ ಪರ ಹೋರಾಟಗಳಲ್ಲಿ ಕಾಣಿಸಿಕೊಂಡು ಚೀನಾ ಕಮ್ಯೂನಿಸ್ಟ್ ಸರ್ವಾಡಳಿತ ಸರಕಾರದ ಕೆಂಗಣ್ಣಿಗೆ ಕ್ಸಿಯಾಬೊ ಗುರಿಯಾಗಿದ್ದರು. ಹತ್ತಾರು ಬಾರಿ ಜೈಲು ಸೇರಿದ್ದರು. ಕಾರ್ಮಿಕರ ಪರ ಮತ್ತು ಮಾನವ ಹಕ್ಕುಗಳ ಪರ ಅವರ ಹೋರಾಟ ಜಗತ್ತಿನ ಗಮನ ಸೆಳೆದಿತ್ತು.
ಇದೀಗ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಿರುವುದಕ್ಕೆ ಚೀನಾ ಖಾರವಾಗಿ ಪ್ರತಿಕ್ರಿಯಿಸಿದೆ. ಈ ಹಿಂದೆ ನಾರ್ವೆಗೆ ಭೇಟಿ ನೀಡಿದ್ದ ಚೀನಾದ ಉಪ ವಿದೇಶಾಂಗ ಸಚಿವರೊಬ್ಬರು, ಕ್ಸಿಯಾಬೊ ಅವರಿಗೆ ಪ್ರಶಸ್ತಿ ನೀಡಿದರೆ ಅದು ಚೀನಾ ಮತ್ತು ನಾರ್ವೆ ಸಂಬಂಧದ ಮೇಲೆ ಗಾಢ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿತ್ತು.
ಸಚಿವರ ಎಚ್ಚರಿಕೆಯ ಹೊರತಾಗಿಯೂ ನಾರ್ವೆ ದಿಕ್ಕೆಡದೆ, ಕ್ಸಿಯಾಬೊ ಅವರನ್ನೇ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯವು, ಈ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಸ್ನೇಹಪರ ವಿಚಾರಗಳಿಗಾಗಿ ಬಳಸಬಹುದಿತ್ತು ಎಂದಿದೆ.
ಚೀನಾದ ಕಾನೂನುಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಚೀನಾದ ನ್ಯಾಯಾಂಗ ಇಲಾಖೆಗಳಿಂದ ಶಿಕ್ಷೆಗಳನ್ನು ಪಡೆದುಕೊಂಡಿರುವ ಕ್ಸಿಯಾಬೊ ಓರ್ವ ಕ್ರಿಮಿನಲ್. ಅವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ನೀತಿಗಳಿಗೆ ವಿರುದ್ಧವಾಗಿ ನಡೆದುಕೊಂಡಂತಾಗಿದೆ ಎಂದು ಚೀನಾ ತಿಳಿಸಿದೆ.