ಅಮೆರಿಕ ಮತ್ತು ಉಳಿದ ನ್ಯಾಟೋ (ಫ್ರಾನ್ಸ್, ಜರ್ಮನಿ, ಬ್ರಿಟನ್ ಸೇರಿದಂತೆ)ರಾಷ್ಟ್ರಗಳು ಪಾಕಿಸ್ತಾನದ ಶತ್ರುಗಳು ಎಂದು ಮಾಜಿ ಕ್ರಿಕೆಟಿಗ, ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ)ನ ಅಧ್ಯಕ್ಷ ಇಮ್ರಾನ್ ಖಾನ್ ಕಿಡಿಕಾರಿದ್ದು, ಡ್ರೋನ್ ದಾಳಿಯಿಂದಾಗಿ ನ್ಯಾಟೋ ಪಡೆ ವಿರುದ್ಧದ ಮತ್ತಷ್ಟು ದ್ವೇಷ ಹುಟ್ಟುಹಾಕಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಸರಕಾರ ಅಮೆರಿಕದ ಡ್ರೋನ್ ದಾಳಿಯನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿರುವುದಾಗಿ ಖಾನ್ ಆರೋಪಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನ ಸರಕಾರ ಪ್ರತಿಯೊಂದಕ್ಕೂ ಅಮೆರಿಕದ ಸಲಹೆಯನ್ನೇ ಕೇಳುತ್ತಿದೆ. ಇದರಿಂದಾಗಿ ಅದು ಎಲ್ಲಾ ರೀತಿಯಿಂದಲೂ ವಿಶ್ವಾಸ ಕಳೆದುಕೊಳ್ಳಲಿದೆ ಎಂದರು.
ಸರಕಾರದ ದುರ್ಬಲ ನೀತಿಯಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆರ್ಥಿಕ ಹೊಡೆತವನ್ನು ಕಾಣಲಿದೆ ಎಂದು ಭವಿಷ್ಯ ನುಡಿದಿರುವ ಅವರು, ಪಾಕ್ ಮೊದಲು ಅಮೆರಿಕದ ಕೈಗೊಂಬೆಯಾಗಿ ವರ್ತಿಸುವುದನ್ನು ನಿಲ್ಲಿಸಲಿ ಎಂಬುದಾಗಿ ಸಲಹೆ ನೀಡಿದ್ದಾರೆ. ಅಲ್ಲದೇ ದೇಶದಲ್ಲಿ ಸಂಭವಿಸಿದ ಪ್ರವಾಹ ಸಂತ್ರಸ್ತರಿಗೆ ವಿದೇಶಗಳು ನೀಡಿದ ಆರ್ಥಿಕ ನೆರವನ್ನು ಸಮರ್ಪಕವಾಗಿ ಉಪಯೋಗಿಸುತ್ತೀರಾ ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ.