ಮನೆಯೊಂದರಿಂದ ಮಗುವನ್ನು ಅಪಹರಿಸಿದ ಕೋತಿಯೊಂದು ಮುಖ, ಕತ್ತುಗಳ ಮೇಲೆ ಕಚ್ಚಿ ನಂತರ ಛಾವಣಿಯ ಮೇಲಿನಿಂದ ಕೆಳಗೆ ಹಾಕಿ ಕೊಂದಿರುವ ಹೃದಯ ವಿದ್ರಾವಕ ಘಟನೆಯೊಂದು ಮಲೇಷಿಯಾದಿಂದ ವರದಿಯಾಗಿದೆ.
ಹುಟ್ಟಿ ನಾಲ್ಕು ದಿನವಷ್ಟೇ ಆಗಿದ್ದ ಹೆಣ್ಣು ಮಗು ಮನೆಯಲ್ಲಿನ ಕೋಣೆಯೊಂದರಲ್ಲಿ ನಿದ್ರಿಸುತ್ತಿತ್ತು. ಈ ಸಂದರ್ಭದಲ್ಲಿ ಒಳ ಪ್ರವೇಶಿಸಿದ್ದ ಕೋತಿ ಮಗುವನ್ನು ಎತ್ತಿಕೊಂಡು ಮನೆಯ ಮೇಲ್ಛಾವಣಿಗೆ ಹತ್ತಿತ್ತು.
ಈ ವಿಚಾರ ಮನೆಯವರಿಗೆ ತಿಳಿದದ್ದು, ಮಗುವನ್ನು ಕೋತಿ ಕೊಂದು ಹಾಕಿದ ಬಳಿಕ. ಮುಖ ಮತ್ತು ಕತ್ತಿನಲ್ಲಿ ಕಚ್ಚಿದ ಗಾಯವಾಗಿದ್ದ ಮಗುವಿನ ಕಳೇಬರ ಮನೆಯ ಹೊರಗಡೆ ಪತ್ತೆಯಾಗಿತ್ತು. ನಂತರ ಮಗುವಿನ ತಾಯಿ ಆಸ್ಪತ್ರೆಗೆ ಧಾವಿಸಿದ್ದಳಾದರೂ, ವೈದ್ಯರು ಮಗು ಸತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಅಜ್ಜ 70ರ ಹರೆಯ ಎ. ವೇಲಾಯುದಂ ಅವರು ಮಗುವನ್ನು ನೋಡಿಕೊಳ್ಳುತ್ತಿದ್ದರು. ಅವರು ಒಂದು ಲೋಟ ನೀರು ತರಲೆಂದು ಅಡುಗೆ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು.
ಇದ್ದಕ್ಕಿದ್ದಂತೆ ಮಗು ಕಾಣೆಯಾಗಿರುವುದಕ್ಕೆ ಗಾಬರಿಗೊಂಡಿದ್ದ ಅವರು ಮನೆಯ ಒಳಗೆಲ್ಲ ಹುಡುಕಾಟ ನಡೆಸಿದ್ದರು. ನಂತರವಷ್ಟೇ ರಕ್ತಸಿಕ್ತವಾಗಿ ಹೊರಗಡೆ ಕಳೇಬರ ಪತ್ತೆಯಾಗಿತ್ತು.
ಈ ಬಗ್ಗೆ ವಿವರಣೆ ನೀಡಿರುವ ಇಲ್ಲಿನ ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಇಸಾಕ್ ಮೊಹಮ್ಮದ್, ಕೋತಿಯು ಮಗುವನ್ನು ಆಹಾರ ಎಂದು ಪರಿಗಣಿಸಿ ಅಪಹರಣ ಮಾಡಿರಬೇಕು. ನಂತರ ಹೆತ್ತವರ ಕೂಗನ್ನು ಕೇಳಿ ಭೀತಿಯಿಂದ ಅದು ಮಗುವನ್ನು ಕೆಳಗೆ ಹಾಕಿರಬಹುದು. ಕೆಳಗೆ ಬಿದ್ದಿದ್ದರಿಂದ ಮಗು ಸಾವನ್ನಪ್ಪಿದೆ ಎಂದರು.
ಕೋತಿಯನ್ನು ನಂತರ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.