ಪಾಕಿಸ್ತಾನ ಭಯೋತ್ಪಾದಕರನ್ನು ಮಟ್ಟಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿರುವ ಅಮೆರಿಕ, ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ದೇಶ ಹಾಗೂ ಗಡಿಭಾಗದಲ್ಲಿ ಅಟ್ಟಹಾಸಗೈಯುತ್ತಿರುವ ಉಗ್ರರನ್ನು ಮಟ್ಟ ಹಾಕಲೇಬೇಕಾಗಿದೆ. ಆದರೆ ಪಾಕಿಸ್ತಾನ ಉದ್ದೇಶ ಪೂರ್ವಕವಾಗಿ ಎಚ್ಚರಿಕೆಯನ್ನು ನಿರ್ಲಕ್ಷಿಸುತ್ತಿದೆ. ಆ ನಿಟ್ಟಿನಲ್ಲಿ ಪಾಕ್ ಮುಂದಿನ ಪರಿಣಾಮ ಎದುರಿಸುವ ಮುನ್ನ ಉಗ್ರರನ್ನು ಮಟ್ಟಹಾಕಲು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ಗಮಿತ ನ್ಯಾಷನಲ್ ಸೆಕ್ಯುರಿಟಿ ಸಲಹೆಗಾರ ಜೇಮ್ಸ್ ಜಾನ್ಸ್ ಜರ್ಮನ್ ಮ್ಯಾಗಜಿನ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ ಸಾಕಷ್ಟು ಬಾರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಆದರೂ ಪಾಕಿಸ್ತಾನ ಉಗ್ರರ ವಿರುದ್ಧ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಇದರಿಂದ ಪಾಕ್ ಆಡಳಿತಕ್ಕೆ ಭಾರೀ ಗಂಡಾಂತರ ಎದುರಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪಾಕ್ ಮತ್ತು ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಉಗ್ರರೇ ಹೆಚ್ಚಿನ ರೀತಿಯಲ್ಲಿ ಪ್ರಭಾವಶಾಲಿಗಳಾಗಿದ್ದಾರೆ. ಪ್ರತಿನಿತ್ಯ ಸ್ಫೋಟ, ಆತ್ಮಹತ್ಯಾ ದಾಳಿ ನಡೆಸುವ ಮೂಲಕ ಭಯದ ವಾತಾವರಣ ನಿರ್ಮಿಸಿದ್ದಾರೆ. ಆ ಪರಿಸ್ಥಿತಿಯನ್ನು ಪಾಕಿಸ್ತಾನ ಸರಕಾರ ನಿವಾರಿಸಬೇಕು ಎಂದು ಜಾನ್ ಸಲಹೆ ನೀಡಿದ್ದಾರೆ.