ಉರ್ದು ಪಾಕ್‌ನ ಅಧಿಕೃತ ಭಾಷೆ: ಹೈಕೋರ್ಟ್‌ನಲ್ಲಿ ಅರ್ಜಿ ವಜಾ
ಇಸ್ಲಾಮಾಬಾದ್, ಬುಧವಾರ, 13 ಅಕ್ಟೋಬರ್ 2010( 20:07 IST )
ಪಾಕಿಸ್ತಾನದಲ್ಲಿ ಉರ್ದು ಅಧಿಕೃತ ಭಾಷೆಯನ್ನಾಗಿ ಬಳಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅರ್ಜಿದಾರ ಮತ್ತು ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚನೆ ನೀಡಿತ್ತು. ಆದರೆ ಇಬ್ಬರೂ ವಿಚಾರಣೆ ವೇಳೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ, ಉರ್ದು ಅಧಿಕೃತ ಭಾಷೆಯಾಗಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಖ್ವಾಜಾ ಮುಹಮ್ಮದ್ ಶರೀಫ್ ವಜಾಗೊಳಿಸಿರುವುದಾಗಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ತಿಳಿಸಿದೆ.
ಸಾನಾ ಉಲ್ಲಾಹ್ ಎಂಬವರು ಉರ್ದು ಅಧಿಕೃತ ಭಾಷೆಯನ್ನಾಗಿ ಬಳಸುವಂತೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಾಕ್ ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರು, 1948ರಲ್ಲಿ ಢಾಕಾದಲ್ಲಿ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಉರ್ದು ಪಾಕಿಸ್ತಾನದ ಅಧಿಕೃತ ಭಾಷೆ ಎಂದು ಘೋಷಿಸಿದ್ದರು.
ಆದರೆ ಇದೀಗ 62 ವರ್ಷ ಕಳೆದ ನಂತರವೂ ಪಾಕಿಸ್ತಾನದಲ್ಲಿ ಉರ್ದು ಅಧಿಕೃತ ಭಾಷೆಯಾಗಿಲ್ಲ. ದೇಶದಲ್ಲಿ ಈಗಲೂ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ ಎಂದು ಸಾನಾ ಅರ್ಜಿಯಲ್ಲಿ ವಿವರಿಸಿದ್ದರು. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದ್ದಾರೆ.