ಇಸ್ಲಾಮಾಬಾದ್, ಗುರುವಾರ, 14 ಅಕ್ಟೋಬರ್ 2010( 15:55 IST )
2007ರಲ್ಲಿ ಸಂವಿಧಾನಬಾಹಿರವಾಗಿ ತುರ್ತುಪರಿಸ್ಥಿತಿಯನ್ನು ಹೇರಿರುವ ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೆಜ್ ಮುಷರ್ರಫ್ ವಿರುದ್ಧ ರಾಜದ್ರೋಹದ ಆರೋಪದಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕೆಂದು ಕೋರಿ ಪಾಕಿಸ್ತಾನದ ಸಿಂಧ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್ ಅನ್ನು ಗುರುವಾರ ವಜಾಗೊಳಿಸಿದ್ದು, ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇದ್ದು ಈ ಬಗ್ಗೆಅರ್ಜಿದಾರರು ಅಪೆಕ್ಸ್ ಮೆಟ್ಟಿಲೇರುವಂತೆ ತಿಳಿಸಿದೆ.
ಮುಷರ್ರಫ್ ಹಾಗೂ ಅವರ ಆಪ್ತರಾದ ಪ್ರಸಿದ್ಧ ವಕೀಲ ಶರ್ಪುದ್ದೀನ್ ಪಿರ್ಜಾದಾ ಮತ್ತು ಮಾಜಿ ಅಟಾರ್ನಿ ಜನರಲ್ ಮಲಿಕ್ ಮುಹಮ್ಮದ್ ಖ್ವಾಯ್ಯುಮ್ ವಿರುದ್ಧ ರಾಜದ್ರೋಹದ ಆರೋಪದ ಮೇಲೆ ವಿಚಾರಣೆ ನಡೆಸಬೇಕೆಂದು ಕೋರಿ ಮೌಲ್ವಿ ಇಕ್ಬಾಲ್ ಹೈದರ್ ಅವರು ಸಿಂಧ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಎರಡು ವಾರಗಳ ಹಿಂದೆಯೇ ಪ್ರಕರಣದ ಕುರಿತು ವಿಚಾರಣೆ ಪೂರ್ಣಗೊಳ್ಳುವವರೆಗೆ ತೀರ್ಪು ನೀಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿತ್ತು. ವಾದವನ್ನು ಆಲಿಸಿದ ನಂತರ ಹೈಕೋರ್ಟ್, ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನ ಮುಂದೆಯೂ ಬರಲಿದ್ದು, ಆ ನಿಟ್ಟಿನಲ್ಲಿ ಹೈಕೋರ್ಟ್ ತೀರ್ಪು ನೀಡುವುದು ಸರಿಯಲ್ಲ ಎಂದು ತಿಳಿಸಿ ಹೈದರ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
2007ರಲ್ಲಿ ಪರ್ವೆಜ್ ಮುಷರ್ರಫ್ ಅವರು ತುರ್ತು ಪರಿಸ್ಥಿತಿ ಹೆಸರಿನಲ್ಲಿ ಮಿಲಿಟರಿ ಆಡಳಿತ ಹೇರಿದ್ದರು ಎಂದು ಹೈದರ್ ತಮ್ಮ ಅರ್ಜಿಯಲ್ಲಿ ದೂರಿದ್ದರು. ಅಲ್ಲದೆ ನ್ಯಾಯಾಂಗದ ಸುಮಾರು 60 ಮಂದಿಯನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಆ ನಿಟ್ಟಿನಲ್ಲಿ ಮುಷ್ ವಿರುದ್ಧ ರಾಜದ್ರೋಹ ಆರೋಪದ ಮೇಲೆ ವಿಚಾರಣೆ ನಡೆಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.