ಇಸ್ಲಾಮಾಬಾದ್, ಗುರುವಾರ, 14 ಅಕ್ಟೋಬರ್ 2010( 17:23 IST )
ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರನ್ನು ಹತ್ಯೆಗೈಯಲು ಯತ್ನಿಸಿದ್ದ ಸಂಚನ್ನು ವಿಫಲಗೊಳಿಸಿರುವುದಾಗಿ ಪಾಕ್ ಪೊಲೀಸರು ಗುರುವಾರ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಏಳು ಮಂದಿಯನ್ನು ಬಂಧಿಸಲಾಗಿದೆ.
ಪಂಜಾಬ್‌ನ ಪೂರ್ವಪ್ರಾಂತ್ಯದ ಬಾಹಾವಾಲ್‌ಪುರ್ ಜಿಲ್ಲೆಯ ಅಹ್ಮದ್‌ಪುರ್ ಶಾರ್ಕಿಯಾ ಎಂಬಲ್ಲಿ ಬುಧವಾರ ಶೂಟ್ ಔಟ್ ನಡೆದ ನಂತರ ಸೆರೆಸಿಕ್ಕ ಉಗ್ರಗಾಮಿಗಳನ್ನು ಕಾನೂನು ಸಚಿವಾಲಯದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ ಪ್ರಧಾನಿ ಹತ್ಯಾ ಸಂಚು ಬಯಲುಗೊಂಡಿತ್ತು.
ಶಂಕಿತ ಉಗ್ರರು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರನ್ನು ಕೊಲ್ಲುವ ಸಂಚು ರೂಪಿಸಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಅಬಿದ್ ಖಾದ್ರಿ ತಿಳಿಸಿದ್ದಾರೆ. ಅಲ್ಲದೆ, ಅವರು ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಗೂ ಮತ್ತಿತರರನ್ನು ಕೊಲ್ಲುವ ಸಂಚು ರೂಪಿಸಿದ್ದರು.
ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್ ಇ ಜಾಂಘ್ವಿಯಿಂದ ಹೊರಬಂದು ಪ್ರತ್ಯೇಕವಾಗಿ ಸಂಘಟನೆ ಕಟ್ಟಿಕೊಂಡಿರುವ ಖ್ವಾರಿ ಇಮ್ರಾನ್ ಉಗ್ರಗಾಮಿ ಸಂಘಟನೆ ಈ ದುಷ್ಕೃತ್ಯದ ಸಂಚು ನಡೆಸಿದೆ. ಇದು ಅಲ್ ಖಾಯಿದಾ ಮತ್ತು ತಾಲಿಬಾನ್ ಸಂಪರ್ಕ ಹೊಂದಿದೆ ಎಂದು ಖಾದ್ರಿ ತಿಳಿಸಿದ್ದಾರೆ.