ಅಮೆರಿಕಾ ಸೆಕ್ಸ್ ನಟನಿಗೆ ಎಚ್ಐವಿ; ಪಾರ್ನ್ ಉದ್ಯಮಕ್ಕೆ ಭೀತಿ
ಲಾಸ್ ಎಂಜಲೀಸ್, ಗುರುವಾರ, 14 ಅಕ್ಟೋಬರ್ 2010( 18:12 IST )
ಕ್ಯಾಲಿಫೋರ್ನಿಯಾದ ಅಶ್ಲೀಲ ವಯಸ್ಕರ (ಪಾರ್ನ್) ಚಿತ್ರೋದ್ಯಮ ತೀವ್ರ ಆಘಾತಕ್ಕೊಳಗಾಗಿದೆ. ಎಚ್ಐವಿ ಸಂಕಟದಿಂದ ಬಳಲುತ್ತಿರುವ ಉದ್ಯಮಕ್ಕೆ ಮತ್ತೊಬ್ಬ ನಟ ಸೇರ್ಪಡೆಯಾಗುವುದರೊಂದಿಗೆ ಆತಂಕ ಹೆಚ್ಚಾಗಿದೆ.
ವಯಸ್ಕರ ಚಿತ್ರದ ನಟನೊಬ್ಬ ಎಚ್ಐವಿ ಪಾಸಿಟಿವ್ ಹೊಂದಿರುವುದು ಬಹಿರಂಗವಾಗುತ್ತಿದ್ದಂತೆ ಉದ್ಯಮದ ಎರಡು ದೊಡ್ಡ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ. ಬೆನ್ನಿಗೆ ಈ ನಟ ಯಾರೆಂಬುದನ್ನು ಬಹಿರಂಗಪಡಿಸಲು ಕೂಡ ಸಂಬಂಧಪಟ್ಟವರು ನಿರಾಕರಿಸಿದ್ದಾರೆ.
ವಯಸ್ಕರ ಉದ್ಯಮದ ವೈದ್ಯಕೀಯ ಚಿಕಿತ್ಸಾ ವಿಭಾಗದಲ್ಲಿ ಈ ನಟ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಜತೆ ಯಾರೆಲ್ಲ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುವ ಯತ್ನ ಮುಂದುವರಿದಿದೆ ಎಂದು ಈ ಕ್ಲಿನಿಕ್‌ನ ವಕ್ತಾರೆ ಜೆನಿಫರ್ ಮಿಲ್ಲರ್ ತಿಳಿಸಿದ್ದಾರೆ.
ನಟನ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ನಾವು ಶೂಟಿಂಗ್ ರದ್ದುಗೊಳಿಸಿದ್ದೇವೆ. ಈತನ ಜತೆ ನಟಿಸಿದ್ದ (?) ಇತರರಿಗೂ ಸೋಂಕು ಹರಡಿರುವ ಸಾಧ್ಯತೆಗಳಿರುವುದರಿಂದ ಸಂಭಾವ್ಯ ಹಾನಿಯನ್ನು ತಪ್ಪಿಸಲು ಈ ತಕ್ಷಣದ ಕ್ರಮಕ್ಕೆ ಬರಲಾಗಿದೆ ಎಂದು ಚಿತ್ರೀಕರಣ ಸ್ಥಗಿತಗೊಳಿಸಿರುವ ಪಾರ್ನ್ ಕಂಪನಿಯೊಂದು ತಿಳಿಸಿದೆ.
ಲಾಸ್ ಎಂಜಲೀಸ್ ಕೌಂಟಿಯ ಸಾರ್ವಜನಿಕ ಆರೋಗ್ಯ ಇಲಾಖಾ ಅಧಿಕಾರಿಗಳ ಪ್ರಕಾರ ವಯಸ್ಕರ ಚಿತ್ರಗಳ ಚಿತ್ರೀಕರಣದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೋಮ್ ಬಳಸುವ ಕುರಿತು ನಿರ್ಲಕ್ಷ್ಯ ವಹಿಸಿರುವುದೇ ಆತಂಕಕ್ಕೆ ಕಾರಣವಾಗಿದೆ. ಅದೇ ಕಾರಣದಿಂದ ಎಚ್ಐವಿ ಮತ್ತಿತರ ಲೈಂಗಿಕ ಸೋಂಕುಗಳು ಹರಡುತ್ತಿವೆ ಎಂದಿದ್ದಾರೆ.
ಚಿತ್ರೀಕರಣ ಸಂದರ್ಭದಲ್ಲಿ ಕಾಂಡೋಮ್ ಬಳಸದೆ ಇರುವುದನ್ನು ಸಮರ್ಥಿಸಿಕೊಂಡಿರುವ ಅಡಲ್ಟ್ ಚಿತ್ರಗಳ ನಿರ್ಮಾಪಕರು, ಹಾಗೆ ಮಾಡಿದಲ್ಲಿ ಪ್ರೇಕ್ಷಕರು ಹೆಚ್ಚಿನ ಒಲವು ತೋರಿಸುವುದಿಲ್ಲ ಎಂದಿದ್ದಾರೆ.
ವಯಸ್ಕರ ಚಿತ್ರವೊಂದರಲ್ಲಿ ನಟಿಸಿದ ನಂತರ ತಕ್ಷಣದ ಪರೀಕ್ಷೆಯಲ್ಲಿ ಮಹಿಳೆಯೊಬ್ಬಳಿಗೆ ಕಳೆದ ವರ್ಷ ಎಚ್ಐವಿ ಇರುವುದು ಪತ್ತೆಯಾಗಿತ್ತು. ಅದಕ್ಕೂ ನಾಲ್ಕು ವರ್ಷಗಳ ಹಿಂದೆ ಕೂಡ ಇದೇ ರೀತಿಯ ಭೀತಿಗಳು ಸೃಷ್ಟಿಯಾಗಿದ್ದವು.
ಅಮೆರಿಕಾದ ಕಾನೂನಿನ ಪ್ರಕಾರ ವಯಸ್ಕರ ಚಿತ್ರಗಳನ್ನು ತಯಾರಿಸಲು ಅವಕಾಶವಿದೆ. ಆದರೆ ಈ ಚಿತ್ರದಲ್ಲಿ ನಟಿಸುವ ವ್ಯಕ್ತಿಗಳು, ಚಿತ್ರೀಕರಣಕ್ಕಾಗಿ ಲೈಂಗಿಕ ಕ್ರಿಯೆ ನಡೆಸುವ 30 ದಿನ ಮೊದಲು ಎಚ್ಐವಿ ಪರೀಕ್ಷೆಗೊಳಗಾಗಬೇಕು.