ಯುವತಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ರಕ್ಷಿಸಲು ಹೋದ 21ರ ಹರೆಯದ ಭಾರತೀಯನೊಬ್ಬನಿಗೆ ಐದು ಮಂದಿಯ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ ಜನಾಂಗೀಯವಾಗಿ ನಿಂದಿಸಿರುವ ಘಟನೆ ಬ್ರಿಟನ್‌ನ ಎಡಿನ್‌ಬರ್ಗ್‌ನಲ್ಲಿ ನಡೆದಿದೆ.
ನಗರದ ಬಟ್ಟೆ ಅಂಗಡಿಯೊಂದರಲ್ಲಿ ಪಂಕಜ್ ರಾವತ್ ಕಾರ್ಯನಿರ್ವಹಿಸುತ್ತಿದ್ದ.ಎಡಿನ್‌ಬರ್ಗ್ ವೆವರ್ಲೈ ಸೇತುವೆ ಬಳಿ ರಾವತ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿರುವುದಾಗಿ ಇವ್‌ನಿಂಗ್ ನ್ಯೂಸ್ ವರದಿ ತಿಳಿಸಿದೆ.
ರಾವತ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸುಮಾರು 20ರ ಹರೆಯದ ಯುವತಿಯನ್ನು ಯುವಕರ ಗುಂಪೊಂದು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ನೋಡಿ ಆತ ಮಧ್ಯಪ್ರವೇಶಿಸಿದ್ದ. ಈ ಸಂದರ್ಭದಲ್ಲಿ ಗುಂಪು ರಾವತ್ ಮೇಲೆ ತಿರುಗಿ ಬಿದ್ದು ಹಿಗ್ಗಾಮುಗ್ಗಾ ಥಳಿಸಿದಾಗ ನೆಲಕ್ಕುರುಳಿ ಬಿದ್ದಿದ್ದ. ಅಲ್ಲದೇ ನೀನು ಭಾರತೀಯನೋ ಅಂತ ಅವಾಚ್ಯ ಶಬ್ದಗಳಿಂದ ಬೈದಿದ್ದರು.
ಆ ಯುವತಿಯನ್ನು ಯುವಕರು ಬಿಗಿದಪ್ಪಿ ಚುಂಬಿಸಲು ಪ್ರಯತ್ನಿಸುತ್ತಿದ್ದಾಗ ಆಕೆ ಯಾರಾದರೂ ರಕ್ಷಿಸಿ ಅಂತ ಕೂಗಿಕೊಳ್ಳುತ್ತಿದ್ದಳು. ಆ ಶಬ್ದ ಕೇಳಿ ತಾನು ರಕ್ಷಿಸಲು ಮುಂದಾಗಿರುವುದಾಗಿ ರಾವತ್ ಪೊಲೀಸರಿಗೆ ತಿಳಿಸಿದ್ದಾನೆ. ಆಗ ಯುವಕರ ಗುಂಪು ರಾವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿತ್ತು.
ರಾವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ತಾನು ಕೆಲಸ ಕಳೆದುಕೊಂಡಿರುವುದಾಗಿ ಅಲವತ್ತುಕೊಂಡಿದ್ದಾನೆ. ಆತ 18ತಿಂಗಳ ಹಿಂದಷ್ಟೇ ಭಾರತದಿಂದ ಎಡಿನ್‌ಬರ್ಗ್‌ಗೆ ತೆರಳಿದ್ದ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಐದು ಮಂದಿ ಯುವಕರನ್ನು ಸೆರೆಹಿಡಿಯಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.