ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನ ಚಲಾಯಿಸುತ್ತಿದ್ದಾಗಲೇ ಸಾವನ್ನಪ್ಪಿದ ಭಾರತ ಪೈಲಟ್ (Indian pilot | Qatar Airways | Kuala Lumpur | Ajay Kukreja)
Bookmark and Share Feedback Print
 
ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಹೊತ್ತಿನಲ್ಲೇ ವಿದೇಶಿ ವಿಮಾನದ ಭಾರತೀಯ ಪ್ರಧಾನ ಪೈಲಟ್ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆಯೊಂದು ವರದಿಯಾಗಿದೆ. ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.

ಸಾವನ್ನಪ್ಪಿದ ಪೈಲಟ್ ಅಜಯ್ ಕುಕ್ರೇಜಾ (43) ಎಂದು ಗುರುತಿಸಲಾಗಿದೆ. ಕತಾರ್ ವಿಮಾನ ಯಾನ ಸಂಸ್ಥೆಗೆ ಸೇರಿದ ವಿಮಾನವು ಪಿಲಿಪೈನ್ಸ್‌ನಿಂದ ಕತಾರ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿತ್ತು. ಇದರಿಂದಾಗಿ ತಕ್ಷಣವೇ ವಿಮಾನವನ್ನು ಮಲೇಷಿಯಾದ ಕೌಲಾಲಂಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿತ್ತು.

ಮನಿಲಾದಿಂದ ದೋಹಾಕ್ಕೆ ತೆರಳುತ್ತಿದ್ದ QR645 ವಿಮಾನದ ಕ್ಯಾಪ್ಟನ್ ಹಾರಾಟದ ಸಂದರ್ಭದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲು ನಾವು ವಿಷಾದಿಸುತ್ತಿದ್ದೇವೆ. ಭಾರತೀಯ ಪ್ರಜೆ ಅಜಯ್ ತನಗೆ ಎದೆ ನೋವು ಎಂದು ಹೇಳಿಕೊಂಡಿದ್ದರು. ತಕ್ಷಣವೇ ಸಹ ಪೈಲಟ್‌ರಲ್ಲಿ ವಿಮಾನವನ್ನು ಇಳಿಸುವಂತೆ ಮನವಿ ಮಾಡಿದ್ದರು ಎಂದು ಕತಾರ್ ಏರ್‌ವೇಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪೈಲಟ್ ಸೂಚನೆಯಂತೆ ವಿಮಾನವನ್ನು ಕೌಲಾಲಂಪುರದ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಆದರೆ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಬಳಿಕ ವಿಮಾನದ ಎಲ್ಲಾ ಸಿಬ್ಬಂದಿಗಳನ್ನು ಬದಲಿಸಲಾಯಿತು. ಬೇರೆ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದ ನಂತರ ವಿಮಾನವು ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ.

ಕಳೆದ ಐದು ವರ್ಷಗಳಿಂದ ಕತಾರ್ ಏರ್‌ವೇಸ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಅಜಯ್ ಇದುವರೆಗೂ ಆರೋಗ್ಯವಾಗಿದ್ದರು. ಅವರಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು.

ಅವರು ಚಲಾಯಿಸುತ್ತಿದ್ದ ವಿಮಾನದಲ್ಲಿ 260 ಪ್ರಯಾಣಿಕರಿದ್ದರು. ಆದರೂ ಪ್ರಯಾಣಿಕರಿಗೆ ಪೈಲಟ್ ಸ್ಥಿತಿಯನ್ನು ವಿಮಾನ ಲ್ಯಾಂಡ್ ಆಗುವವರೆಗೆ ತಿಳಿಸಿರಲಿಲ್ಲ ಎಂದು ಮೂಲಗಳು ಹೇಳಿವೆ.

ಅಸ್ತಮಾ ಹೊಂದಿದ್ದ ಅಜಯ್ ತನ್ನ ಜತೆ ಸದಾ ಇನ್‌ಹೇಲರ್ ಇಟ್ಟುಕೊಂಡಿರುತ್ತಿದ್ದರು. ಆದರೆ ಅವರು ಯಾವತ್ತೂ ಎದೆ ನೋವಿನಿಂದ ಬಳಲಿರಲಿಲ್ಲ ಎಂದು ಅವರ ದೋಹಾದಲ್ಲಿರುವ ಕುಟುಂಬದ ಮೂಲಗಳು ಹೇಳಿವೆ. ಶವದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕೌಲಾಲಂಪುರದಿಂದ ನೇರವಾಗಿ ಮುಂಬೈಗೆ ಕಳುಹಿಸಲಾಗುತ್ತದೆ.

ಅಜಯ್ ತನ್ನ ಪತ್ನಿ, 13ರ ಹರೆಯದ ಪುತ್ರ ಹಾಗೂ 10ರ ಹರೆಯದ ಪುತ್ರಿಯನ್ನು ಅಗಲಿದ್ದಾರೆ. ಅವರ ಹೆತ್ತವರು ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕೆಲಸದ ಕಾರಣಗಳಿಗಾಗಿ ಅವರು ಕಳೆದ ಐದು ವರ್ಷಗಳಿಂದ ದೋಹಾದಲ್ಲಿ ನೆಲೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ