ಇಸ್ಲಾಮಾಬಾದ್, ಶನಿವಾರ, 16 ಅಕ್ಟೋಬರ್ 2010( 12:59 IST )
ಸಾಮೂಹಿಕ ನ್ಯಾಯಮೂರ್ತಿಗಳ ವಜಾಕ್ಕೆ ಸರಕಾರ ಸಂಚು ರೂಪಿಸಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಇಫ್ತೇಕಾರ್ ಚೌಧರಿ ನ್ಯಾಯಮೂರ್ತಿಗಳೊಂದಿಗೆ ತುರ್ತುಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದ ಸರಕಾರ, ಮತ್ತೆ ನ್ಯಾಯಮೂರ್ತಿಗಳನ್ನು ವಜಾಗೊಳಿಸಲಿದೆ ಎಂದು ಖಾಸಚಿ ಟೆಲಿವಿಜನ್ ಚಾನೆಲ್ ಸುದ್ದಿಯನ್ನು ಬಿತ್ತರಿಸಿದ್ದರಿಂದ ದೇಶಾದ್ಯಂತ ಮತ್ತೆ ನ್ಯಾಯಾಂಗ ಹಾಗೂ ರಾಜ್ಯಾಂಗದ ಮಧ್ಯೆ ಸಂಘರ್ಷ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹಿರಿಯ ರಾಜಕಾರಣಿಗಳು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿಗಳ ವಜಾ ಕುರಿತಂತೆ ಹರಡಿದ ವರದಿಗಳ ಬಗ್ಗೆ ಸ್ಪಷ್ಟನೆ ನೀಡುವಂತೆ, ಅಪೆಕ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಇಫ್ತೇಕಾರ್ ಚೌಧರಿ, ಪ್ರಧಾನಿ ಗಿಲಾನಿಯವರನ್ನು ಒತ್ತಾಯಿಸಿದ್ದಾರೆ.
ಸರಕಾರದ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಯಾವುದೇ ಉದ್ದೇಶಗಳಿಲ್ಲ. ವರದಿಗಳು ಆಧಾರರಹಿತವಾಗಿವೆ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಸ್ಪಷ್ಟಪಡಿಸಿದ್ದಾರೆ.