ಮುಂಬೈ ದಾಳಿ; ಹೆಡ್ಲಿ ಪತ್ನಿಯರು ಅಮೆರಿಕಾಕ್ಕೆ ಎಚ್ಚರಿಸಿದ್ದರು
ವಾಷಿಂಗ್ಟನ್, ಭಾನುವಾರ, 17 ಅಕ್ಟೋಬರ್ 2010( 13:35 IST )
ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯ್ಯದ್ ಗಿಲಾನಿ ಪಾಕಿಸ್ತಾನದ ಭಯೋತ್ಪಾದಕರ ಜತೆ ಸಂಬಂಧ ಹೊಂದಿದ್ದಾನೆ ಮತ್ತು ಪ್ರಮುಖ ದಾಳಿಯೊಂದಕ್ಕೆ ಸಂಚು ರೂಪಿಸುತ್ತಿದ್ದಾನೆ ಎಂದು ಆತನ ಇಬ್ಬರು ಪತ್ನಿಯರು ಅಮೆರಿಕಾದ ಅಧಿಕಾರಿಗಳಿಗೆ ಮುಂಬೈ ದಾಳಿಗೂ ಮೊದಲು ಎಚ್ಚರಿಕೆ ನೀಡಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಹೆಡ್ಲಿಯನ್ನು ಮದುವೆಯಾಗಿದ್ದ ಅಮೆರಿಕಾ ಮಹಿಳೆಯೋರ್ವಳು 2005ರಲ್ಲೇ ಹೆಡ್ಲಿಯ ಕುರಿತು ಅಮೆರಿಕಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಆತ ಪಾಕಿಸ್ತಾನದ ಐಎಸ್ಐ ಬೆಂಬಲಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾ ಕಾರ್ಯಕರ್ತನಾಗಿದ್ದಾನೆ ಎಂಬ ಶಂಕೆ ನನಗಿದೆ ಎಂದು ತಿಳಿಸಿದ್ದಳು.
ಈ ಸುದ್ದಿ ಬಹಿರಂಗವಾದ ಬೆನ್ನಿಗೆ ಹೆಡ್ಲಿಯ ಎರಡನೇ ಪತ್ನಿಯೂ ಅದೇ ರೀತಿಯ ಹೇಳಿಕೆ ನೀಡಿದ್ದಾಳೆ. ಹೆಡ್ಲಿ ಪ್ರಮುಖ ದಾಳಿಯೊಂದಕ್ಕೆ ಸಂಚು ರೂಪಿಸಿದ್ದ. ಭಾರತಕ್ಕೆ ಆಗಾಗ ಪ್ರಯಾಣಿಸುತ್ತಿದ್ದ ಆತ ಭಾರತದ ವಿರುದ್ಧ ತೀವ್ರ ದ್ವೇಷ ಹೊಂದಿದ್ದ. ಇದನ್ನು ಅಧಿಕಾರಿಗಳಿಗೆ ನಾನು ತಿಳಿಸಿರುವ ಹೊರತಾಗಿಯೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾಳೆ.
ಹೆಡ್ಲಿಯ ಮೂವರು ಪತ್ನಿಯರ ಪೈಕಿ ಇಬ್ಬರು ಅಮೆರಿಕಾಕ್ಕೆ ಎಚ್ಚರಿಕೆ ನೀಡಿದ್ದರ ಹೊರತಾಗಿಯೂ ಆತನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ಆತ 2002ರಿಂದ 2009ರ ನಡುವೆ ಲಷ್ಕರ್ ಇ ತೋಯ್ಬಾ ಜತೆ ನಿರಂತರ ಸಂಪರ್ಕ ಹೊಂದಿದ್ದ ಮತ್ತು ದಾಳಿಗಳ ಸಂಚು ರೂಪಿಸಿದ ಎಂದು ಹೇಳಲಾಗಿದೆ.
ಅಮೆರಿಕಾದ ಮಾದಕ ದ್ರವ್ಯ ಇಲಾಖೆಯೊಂದರ ಮಾಹಿತಿದಾರನಾಗಿ ಪಾಕಿಸ್ತಾನದಲ್ಲಿ ಸುದೀರ್ಘಾವಧಿ ಕೆಲಸ ಮಾಡಿದ್ದ 50ರ ಹರೆಯದ ಹೆಡ್ಲಿ, ಪಾಕಿಸ್ತಾನ ಮತ್ತು ಅಮೆರಿಕಾದ ನೆರವಿನಿಂದ ಸುಲಭವಾಗಿ ವಿಶ್ವದೆಲ್ಲೆಡೆ ಸಂಚರಿಸುತ್ತಿದ್ದ. ಇದೇ ಅವಕಾಶವನ್ನು ಬಳಸಿಕೊಂಡು ಆತ ಭಾರತಕ್ಕೂ ಭೇಟಿ ನೀಡಿ ಪಿತೂರಿದಾರರಿಗೆ ಸಹಕಾರ ನೀಡಿದ್ದ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.