ಇಸ್ಲಾಮಾಬಾದ್, ಸೋಮವಾರ, 18 ಅಕ್ಟೋಬರ್ 2010( 16:06 IST )
ಕಾಶ್ಮೀರ ವಿವಾದ ಪಾಕಿಸ್ತಾನದ ರಾಷ್ಟ್ರೀಯ ವಿಚಾರದ ಅಜೆಂಡಾ ಆಗಿದೆ. ಯಾವುದೇ ಕಾರಣಕ್ಕೂ ಈ ವಿಚಾರವನ್ನು ಮರೆಯುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ನಮ್ಮ ರಾಷ್ಟ್ರೀಯ ವಿಚಾರದ ಕಾರ್ಯಸೂಚಿಯಾಗಿದೆ. ಅದನ್ನು ಮರೆತು ಬಿಡುವ ಪ್ರಶ್ನೆಯೇ ಇಲ್ಲ. ಕಾಶ್ಮೀರ ಜನರು ನಮ್ಮ ಹೃದಯದಲ್ಲಿ ಜೀವಿಸುತ್ತಿದ್ದಾರೆ. ಈ ಪ್ರೀತಿಯನ್ನು ನಾವು ನಮ್ಮ ದಿವಂಗತ ನೇತಾರ, ಪಾಕ್ ಅಧ್ಯಕ್ಷರಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋ ಅವರಿಂದ ವಂಶಪಾರಂಪರ್ಯವಾಗಿ ಪಡೆದಿರುವುದಾಗಿ ಗಿಲಾನಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ತಿಳಿಸಿದರು.
ತಮ್ಮ ಸರಕಾರದ ಸತತ ಪ್ರಯತ್ನದಿಂದಾಗಿ ಇಂದು ವಿಶ್ವ ಸಮುದಾಯ ಕೂಡ ಕಾಶ್ಮೀರ ವಿವಾದಿತ ಪ್ರದೇಶ ಎಂಬುದನ್ನು ಗುರುತಿಸತೊಡಗಿದೆ. ಇದು ನಿಜಕ್ಕೂ ನಮಗೆ ದೊರೆತ ದೊಡ್ಡ ಯಶಸ್ಸಾಗಿದೆ. ಹಾಗಾಗಿ ಕಾಶ್ಮೀರ ವಿವಾದ ಕುರಿತಂತೆ ತ್ರಿಪಕ್ಷೀಯ ಮಾತುಕತೆಗೂ ಯುರೋಪ್ ಪಾರ್ಲಿಮೆಂಟ್ ಸಹಮತ ಸೂಚಿಸಿರುವುದಾಗಿ ಗಿಲಾನಿ ಈ ಸಂದರ್ಭದಲ್ಲಿ ಹೇಳಿದರು.
ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಹಾಗೂ ಪಾಕಿಸ್ತಾನದ ದೃಷ್ಟಿಕೋನವನ್ನು ಯುರೋಪ್ ಸಂಸತ್ ಕೂಡ ಅಂಗೀಕರಿಸಿರುವುದಾಗಿ ತಿಳಿಸಿದರು. ಅಲ್ಲದೇ ಕಾಶ್ಮೀರ ವಿವಾದ ಕುರಿತಂತೆ ಬ್ರುಸೆಲ್ಸ್‌ನಲ್ಲಿ ಸತತವಾಗಿ ನಡೆದ ಸಭೆಗೆ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ಅತ್ತೀಕ್ ಅಹ್ಮದ್ ಖಾನ್ ಭಾಗವಹಿಸಿರುವುದಾಗಿ ತಿಳಿಸಿದರು.