ಇಸ್ಲಾಮಾಬಾದ್, ಸೋಮವಾರ, 18 ಅಕ್ಟೋಬರ್ 2010( 18:14 IST )
ಪಾಕಿಸ್ತಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮುತ್ತಾಹಿದಾ ಖ್ವಾಮಿ ಮೂವ್‌ಮೆಂಟ್(ಎಂಕ್ಯೂಎಂ) ಜಯಭೇರಿ ಬಾರಿಸಿದ್ದು, ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 27 ಮಂದಿ ಸಾವನ್ನಪ್ಪಿ, 60ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಕರಾಚಿಯಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಪಿಎಸ್-94 ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶದಲ್ಲಿ ಎಂಕ್ಯೂಎಂನ ಸೈಫುದ್ದೀನ್ ಖಾಲೀದ್ ಜಯಭೇರಿ ಬಾರಿಸಿರುವುದಾಗಿ ದಿ ಡೈಲಿ ಟೈಮ್ಸ್ ವರದಿ ಮಾಡಿದೆ. ಆದರೆ ಖಾಲೀದ್ ಗೆಲುವನ್ನು ಚುನಾವಣಾ ಆಯೋಗ ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ ಎಂದು ಹೇಳಿದೆ.
ಆಗೋಸ್ಟ್ 3ರಂದು ಎಂಕ್ಯೂಎಂ ಶಾಸಕ ರಾಜಾ ಹೈದರ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಆ ನಂತರ ಪಿಎಸ್-94 ಕ್ಷೇತ್ರಕ್ಕೆ ಉಪ ಚುನಾವಣೆಯ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಪಿಎಸ್-94 ಕ್ಷೇತ್ರದಲ್ಲಿ ಒಟ್ಟು 92, 125 ಮತ ಚಲಾವಣೆಯಾಗಿತ್ತು. ಇದರಲ್ಲಿ 189 ಮತ ತಿರಸ್ಕೃತಗೊಂಡಿರುವುದಾಗಿ ಅನಧಿಕೃತ ಮೂಲವೊಂದು ತಿಳಿಸಿದೆ.
ಚುನಾವಣೆಯಲ್ಲಿ ಖಾಲೀದ್ ಅವರು 91,125 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದರೆ, ಅವಾಮಿ ನ್ಯಾಷನಲ್ ಪಕ್ಷ(ಎಎನ್‌ಪಿ)ದ ಅಭ್ಯರ್ಥಿ ರಿಯಾಜ್ ಪಿರ್ ಗುಲ್ ಕೇವಲ 292 ಮತ ಗಳಿಸಿ ಹೀನಾಯವಾಗಿ ಸೋಲುಂಡಿದ್ದಾರೆ.
ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಡೆಯುವಷ್ಟು ಮತ ಗಳಿಸಿ ಈಡುಗಂಟು ಕಳೆದುಕೊಂಡಿರುವುದಾಗಿ ವರದಿ ತಿಳಿಸಿದ್ದು, ಪಕ್ಷೇತರ ಅಭ್ಯರ್ಥಿಗಳಾದ ಜೇನತ್ ಯಾಸ್ಮಿನ್ 100 ಮತ, ಅಬ್ದುಲ್ ಹಕ್ 90 ಹಾಗೂ ಮಕ್‌ಸೂದ್ ಅಲಾಂ 57 ಮತ ಪಡೆದಿದ್ದಾರೆ.
ಭಾನುವಾರ ನಡೆದ ಉಪ ಚುನಾವಣೆ, ಫಲಿತಾಂಶ ಘೋಷಣೆಯ ದಿನವಾದ ಸೋಮವಾರ ಹಿಂಸಾಚಾರ ಭುಗಿಲೆದ್ದು ಸುಮಾರು 27 ಜನರು ಸಾವಿಗೀಡಾಗಿದ್ದಾರೆ. ಇದು ಎಂಕ್ಯೂಎಂ ಮತ್ತು ಎಎನ್‌ಪಿ ಕಾರ್ಯಕರ್ತರ ನಡುವಿನ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಂಭವಿಸಿದ ಹಿಂಸಾಚಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.