ರಷ್ಯಾ ದಕ್ಷಿಣ ಪ್ರಾಂತ್ಯದ ಚೆಚೆನ್ಯಾ ಸಂಸತ್ ಆವರಣದಲ್ಲಿ ಮಂಗಳವಾರ ಏಕಾಏಕಿ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ಹಾಗೂ ಇಬ್ಬರು ಗನ್‌ಮ್ಯಾನ್‌ಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿರುವುದಾಗಿ ಆರ್‌ಐಎ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
ಚೆಚೆನ್ಯಾ ಸಂಸತ್ ಆವರಣದಲ್ಲಿ ಉಗ್ರಗಾಮಿ ಸಂಘಟನೆಯ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಲ್ಲದೆ, ಇಬ್ಬರು ಶಸ್ತ್ರಧಾರಿ ಬಂಡುಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಸಂಸತ್ ಭದ್ರತಾ ಪಡೆ ಬಂಡುಕೋರರನ್ನು ಹಿಮ್ಮೆಟ್ಟಿಸಲು ಪ್ರತಿದಾಳಿ ನಡೆಸುತ್ತಿದ್ದು, ಘರ್ಷಣೆ ಮುಂದುವರಿದಿರುವುದಾಗಿ ವರದಿ ವಿವರಿಸಿದೆ. ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದಾಗಿಯೂ ವರದಿ ತಿಳಿಸಿದೆ.
ರಷ್ಯಾದ ಗಡಿಭಾಗದಲ್ಲಿನ ಸಂಪ್ರದಾಯವಾದಿ ಕ್ರಿಶ್ಚಿಯನ್ ಸಮುದಾಯ ಹೆಚ್ಚಾಗಿದ್ದು, ಇಲ್ಲಿನ ಉತ್ತರ ಕಾಕಾಸಸ್‌ನಲ್ಲಿ ಇಸ್ಲಾಮಿಸ್ಟ್ ಬಂಡುಕೋರರು ಸತತವಾಗಿ ದಾಳಿ ನಡೆಸುತ್ತಲೇ ಇದ್ದಿರುವುದು ಚೆಚೆನ್ಯಾಗೆ ಹೆಚ್ಚಿನ ಆತಂಕಕಾರಿಯಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ಚೆಚೆನ್ಯಾ ಬಂಡುಕೋರರ ವಿರುದ್ಧದ ಹೋರಾಟದಲ್ಲಿ ಜಯ ನಿಶ್ಚಿತ ಎಂದು ಕ್ರೆಮ್ಲಿನ್ ಘೋಷಿಸಿದ್ದಾರೆ.
ಆದರೆ ಇತ್ತೀಚೆಗಿನ ದಿನಗಳಲ್ಲಿ ಗುಂಡಿನ ಹಾಗೂ ಬಾಂಬ್ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ಬಂಡುಕೋರರನ್ನು ಮಟ್ಟಹಾಕುವಲ್ಲಿ ರಷ್ಯಾ ವಿಫಲವಾಗಿದೆ ಎಂದು ವಿಶ್ಲೇಷಣಕಾರರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.