ವಾಣಿಜ್ಯ ನಗರಿ ಮುಂಬೈ ಮೇಲಿನ ದಾಳಿಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಎಂಬುದಾಗಿ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಬಂಧಿತ ಆರೋಪಿ ಡೇವಿಡ್ ಹೆಡ್ಲಿ ಭಾರತೀಯ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
2008ರ ನವೆಂಬರ್ 28ರಂದು ಮುಂಬೈ ಭಯೋತ್ಪಾದನಾ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು. ದಾಳಿ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಪಾಕಿಸ್ತಾನಿ ಮೂಲದ ಅಮೆರಿಕ ಪ್ರಜೆ ಡೇವಿಡ್ ಹೆಡ್ಲಿ, ಮುಂಬೈ ದಾಳಿಗೆ ಐಎಸ್ಐ ಎಲ್ಲಾ ರೀತಿಯ ನೆರವು ನೀಡಿರುವುದಾಗಿ ತಿಳಿಸಿದ್ದಾನೆ ಎಂದು ಬ್ರಿಟನ್‌ನ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ದಾಳಿಗೂ ಮುನ್ನ ಹೆಡ್ಲಿ ಐಎಸ್ಐನ ಅಧಿಕಾರಿಗಳು ಮತ್ತು ಲಷ್ಕರ್ ಇ ತೊಯ್ಬಾದ ಹಿರಿಯ ಉಗ್ರ ಮುಖಂಡರ ಜೊತೆ ಹಲವು ಬಾರಿ ಮಾತುಕತೆ ನಡೆಸಿರುವುದಾಗಿಯೂ ವರದಿ ವಿವರಿಸಿದ್ದು, ಈ ಬಗ್ಗೆ ಹೆಡ್ಲಿ ಭಾರತೀಯ ಅಧಿಕಾರಗಳ ಮುಂದೆ ಬಾಯ್ಬಿಟ್ಟಿರುವ 109 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದೆ.
ಮುಂಬೈ ದಾಳಿಯ ಹಿಂದೆ ಪಾಕಿಸ್ತಾನಿ ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಇ ತೊಯ್ಬಾದ ಕೈವಾಡ ಇರುವುದಾಗಿ ಭಾರತ ಗಂಭೀರವಾಗಿ ಆರೋಪಿಸಿತ್ತು.
ಪಾಕಿಸ್ತಾನದ ಐಎಸ್ಐ ಭಾರತದ ಮೇಲೆ ದಾಳಿ ನಡೆಸುವ ಕುರಿತು ಯಾವುದೇ ಸಂದಿಗ್ಧತೆ ಹೊಂದಿಲ್ಲವಾಗಿತ್ತು ಎಂದು ಹೆಡ್ಲಿ ಭಾರತೀಯ ತನಿಖಾಧಿಕಾರಿಗಳಿಗೆ ತಿಳಿಸಿದ್ದ. ಜೂನ್ ತಿಂಗಳಿನಲ್ಲಿ ಅಮೆರಿಕದಲ್ಲಿ ಭಾರತೀಯ ಅಧಿಕಾರಿಗಳು ಸುಮಾರು 34 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.
ಆದರೆ ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ಐ ಸಂಸ್ಥೆ ಶಾಮೀಲಾಗಿದೆ ಎಂಬ ಗಾರ್ಡಿಯನ್ ಪತ್ರಿಕೆ ವರದಿ ಆಧಾರರಹಿತವಾದದ್ದು ಎಂದು ಐಎಸ್ಐ ವಕ್ತಾರ ಪ್ರತಿಕ್ರಿಯೆ ನೀಡಿದ್ದಾರೆ.