ಪಾಕಿಸ್ತಾನ ಪ್ರವಾಹ; ಇನ್ನೂ 7 ಮಿಲಿಯನ್ ನಿರಾಶ್ರಿತರು: ವಿಶ್ವಸಂಸ್ಥೆ
ಇಸ್ಲಾಮಾಬಾದ್, ಮಂಗಳವಾರ, 19 ಅಕ್ಟೋಬರ್ 2010( 17:55 IST )
ಪಾಕಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಪ್ರವಾಹದಿಂದಾಗಿ ಇಂದಿಗೂ ಏಳು ಮಿಲಿಯನ್‌ಗಿಂತಲೂ ಅಧಿಕ ಮಂದಿ ಸೂರೇ ಇಲ್ಲದೆ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
ಕಳೆದ ಜುಲೈ ತಿಂಗಳಲ್ಲಿ ನಡೆದ ಭಾರೀ ಪ್ರವಾಹದಿಂದಾಗಿ ಸಾವಿರಾರು ಹಳ್ಳಿಗಳು ಅಕ್ಷರಶಃ ಮುಳುಗಡೆಯಾಗಿದ್ದು, ಸಾಕಷ್ಟು ಸಾವುನೋವು, ಆಸ್ತಿಪಾಸ್ತಿ ನಷ್ಟವಾಗಿತ್ತು. ಇದರಿಂದ ಲಕ್ಷಗಟ್ಟಲೆ ಮಂದಿ ನಿರಾಶ್ರಿತರಾಗಿದ್ದು, ಇಂದಿಗೂ ಸೂಕ್ತ ರಕ್ಷಣೆ ಸಿಗದೆ ಅದೇ ಪರಿಸ್ಥಿತಿಯಲ್ಲೇ ಇದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಒಂದು ಅಂದಾಜಿನ ಪ್ರಕಾರ ಈ ನಿರಾಶ್ರಿತರ ಸಂಖ್ಯೆ ಏಳು ಮಿಲಿಯನ್‌ಗಳಷ್ಟಿರಬಹುದು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಈ ಪ್ರವಾಹದ ನೇರ ಪರಿಣಾಮ 21 ಮಿಲಿಯನ್ ಜನರ ಮೇಲಾಗಿದ್ದು, 1.9 ಮಿಲಿಯನ್ ಮನೆಗಳು ನಾಶವಾಗಿತ್ತು.
ಈಗಾಗಲೇ ವಿಶ್ವಸಂಸ್ಥೆ ಎರಡು ಬಿಲಿಯನ್ ಡಾಲರ್ ಮೊತ್ತವನ್ನು ನಿರಾಶ್ರಿತರಿಗಾಗಿ ನೀಡಿದ್ದು, ಶೀಘ್ರದಲ್ಲೇ ಸುಮಾರು 14 ಮಿಲಿಯನ್ ಮಂದಿಗೂ ಈಗಲೂ ಸಹಾಯದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ.