ಹೆಡ್ಲಿ ಪತ್ನಿಯ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಿರಲಿಲ್ಲ: ಯುಎಸ್
ವಾಷಿಂಗ್ಟನ್, ಮಂಗಳವಾರ, 19 ಅಕ್ಟೋಬರ್ 2010( 18:53 IST )
ಈ ಮೊದಲೇ ತನ್ನ ಪತಿಗೆ ಭಯೋತ್ಪಾದನೆಯ ಲಿಂಕ್ ಇರುವ ಬಗ್ಗೆ ಯುಎಸ್ ಎಂಬಸಿಗೆ ಸುಳಿವು ನೀಡಿದ್ದರೂ, ಅದು ನಿರ್ಲಕ್ಷ್ಯ ಮಾಡಿತ್ತೆಂಬ ಭಯೋತ್ಪಾದಕ ಡೇವಿಡ್ ಹೆಡ್ಲಿಯ ಪತ್ನಿಯ ಹೇಳಿಕೆಯನ್ನು ಯುಎಸ್ ತಳ್ಳಿ ಹಾಕಿದೆ.
2008ರ ಮುಂಬೈ ದಾಳಿಯ ಆರೋಪಿ ಡೇವಿಡ್ ಹೆಡ್ಲಿಯ ಪತ್ನಿ ನೀಡಿದ ಸುಳಿವನ್ನು ನಾವು ನಿರ್ಲಕ್ಷಿಸಿರಲಿಲ್ಲ. ಆದರೆ, ಆಕೆ ನೀಡಿದ ಸುಳಿವಿಗೆ ಯಾವುದೇ ಆಧಾರವಿರಲಿಲ್ಲ ಎಂದು ಯುಎಸ್ ಸ್ಪಷ್ಟಪಡಿಸಿದೆ. ಪಾಕಿಸ್ತಾನಿ ಅಮೆರಿಕನ್ ಆಗಿರುವ ಹೆಡ್ಲಿಗೆ ಭಯೋತ್ಪಾದನಾ ಲಿಂಕ್ ಇರುವ ಬಗ್ಗೆ ಆತನ ಪತ್ನಿ ನೀಡಿದ ಎಚ್ಚರಿಕೆಯ ಮಾತಿನಲ್ಲಿ ಯಾವ ಹುರುಳೂ ಇರಲಿಲ್ಲ ಎಂದಿದೆ.
ಇದು ಮೊದಲೇ ಗೊತ್ತಿದ್ದರೆ, ಭಾರತೀಯ ಸರ್ಕಾಕ್ಕೆ ಇದನ್ನು ಹೇಳುವ ಮೂಲಕ ಭಯೋತ್ಪಾದನೆಯನ್ನು ತಪ್ಪಿಸಬಹುದಾಗಿತ್ತು ಎಂಬ ಲೆಕ್ಕಾಚಾರಗಳನ್ನೆಲ್ಲ ತಳ್ಳಿ ಹಾಕಿರುವ ಅಮೆರಿಕ, ನಾವು ಭಾರತಕ್ಕೆ ತಿಳಿಸಬಹುದಾಗಿತ್ತೇನೋ ನಿಜ. ಆದರೆ, ಈ ಭಯೋತ್ಪಾದನಾ ದಾಳಿಯ ಬಗ್ಗೆ ನಮಗೆ ಯಾವುದೇ ಮಾಹಿತಿಯಿರಲಿಲ್ಲ. ಎಲ್ಲಿ, ಯಾವಾಗ, ಏನು ಎಂಬ ಸಣ್ಣ ಮಾಹಿತಿಗಳೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ನಾವು ಆ ಕ್ಷಣದಿಂದಲೇ ಮಾಹಿತಿಗಳನ್ನು ಕಲೆ ಹಾಕಲು ಪ್ರಯತ್ನಿಸಿದ್ದೇವೆ. ಜೊತೆಗೆ ಭಾರತವೂ ಸೇರಿದಂತೆ ಈ ಮಾಹಿತಿ ತಿಳಿಸಿದ್ದೆವು ಎಂದು ಹೇಳಿದೆ.
ಭಯೋತ್ಪಾದನಾ ಧಾಳಿಯ ನಂತರವೂ ಭಾರತದ ಪ್ರತಿ ತನಿಖೆಗೂ ನಾವು ಸಹಕರಿಸುತ್ತಲೇ ಬಂದಿದ್ದೇವೆ ಎಂದಿರುವ ಯುಎಸ್, ಮುಂದಿನ ತಿಂಗಳೂ ಈ ಕುರಿತಾಗಿ ರಾಷ್ಟ್ರಪತಿಯೊಂದಿಗೆ ಸಮಾಲೋಚಿಸಲು ಭಾರತಕ್ಕೆ ಭೇಟಿ ನೀಡಲಿದ್ದೇವೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.