ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿರುವ ತಾಲಿಬಾನ್ ಸಂಘಟನೆ ಜೊತೆ ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ಶೀಘ್ರವೇ ಮಾತುಕತೆ ನಡೆಸಲಿದ್ದಾರೆ ಎಂದು ಅಫ್ಘಾನ್ ಸಚಿವರೊಬ್ಬರು ತಿಳಿಸಿದ್ದಾರೆ.
ತಾಲಿಬಾನ್ ಜತೆಗಿನ ಮಾತುಕತೆ ತುಂಬಾ ಸೂಕ್ಷ್ಮ ವಿಚಾರವಾಗಿದ್ದರಿಂದ ಸಚಿವರು ಹೆಸರನ್ನು ಹೇಳಲು ನಿರಾಕರಿಸಿದ್ದಾರೆ. ಅಲ್ಲದೆ, ಅಫ್ಘಾನ್ ಸರಕಾರ ಪಾಕಿಸ್ತಾನ ಮೂಲದ ಹಕ್ಕಾನಿ ನೆಟ್ವರ್ಕ್‌ನ ಮುಖಂಡ ಜಲಾಲುದ್ದೀನ್ ಹಕ್ಕಾನಿ ಜೊತೆ ನೇರ ಸಂಪರ್ಕ ಹೊಂದಿರುವುದಾಗಿಯೂ ವಿವರಿಸಿದ್ದಾರೆ.
ಏತನ್ಮಧ್ಯೆ, ಅಫ್ಘಾನಿಸ್ತಾನ ಸರಕಾರದೊಂದಿಗೆ ಪ್ರಾಥಮಿಕ ಹಂತದ ಚರ್ಚೆಯಲ್ಲಿ ತಾಲಿಬಾನ್ ಸಂಘಟನೆಯ ಮೂರು ಮಂದಿ ಭಾಗವಹಿಸಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.
ತಾಲಿಬಾನ್ ಸಂಘಟನೆಯ ಹಿರಿಯ ಮುಖಂಡರ ಜೊತೆ ಮಾತುಕತೆ ನಡೆಸಲು ಶಕ್ತಿಮೀರಿ ಪ್ರಯತ್ನಿಸುತ್ತಿರುವ ಅಫ್ಘಾನಿಸ್ತಾನ ಸರಕಾರದ ಪ್ರಯತ್ನವನ್ನು ಬೆಂಬಲಿಸುವುದಾಗಿಯೂ ಅಮೆರಿಕ ಇತ್ತೀಚೆಗಷ್ಟೇ ಅಭಿಪ್ರಾಯವ್ಯಕ್ತಪಡಿಸಿತ್ತು.