ವಾಷಿಂಗ್ಟನ್, ಗುರುವಾರ, 21 ಅಕ್ಟೋಬರ್ 2010( 15:52 IST )
PTI
ಮುಂದಿನ ತಿಂಗಳು ಭಾರತ ಪ್ರವಾಸ ಮಾಡುವ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದು ಶ್ವೇತಭವನ ತಿಳಿಸಿದೆ.
ತಾನು 2011ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಾಗಿ ಅಮೆರಿಕಾ-ಪಾಕಿಸ್ತಾನ ರಚನಾತ್ಮಕ ಮಾತುಕತೆಗಾಗಿ ವಾಷಿಂಗ್ಟನ್‌ಗೆ ಆಗಮಿಸಿರುವ ಪಾಕಿಸ್ತಾನದ ನಿಯೋಗಕ್ಕೆ ಒಬಾಮ ಸ್ಪಷ್ಟಪಡಿಸಿದ್ದಾರೆ.
ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಫರ್ವೇಜ್ ಕಯಾನಿಯವರು ಪಾಕಿಸ್ತಾನದ ನಿಯೋಗದ ನೇತೃತ್ವ ವಹಿಸಿದ್ದಾರೆ.
ಮುಂದಿನ ತಿಂಗಳಿನ ಏಷಿಯಾ ಪ್ರವಾಸದ ಸಂದರ್ಭದಲ್ಲಿ ತಾನು ಪಾಕಿಸ್ತಾನಕ್ಕೆ ಬರುತ್ತಿಲ್ಲ. ಆದರೆ 2011ರಲ್ಲಿ ಬರಲು ಬದ್ಧನಾಗಿದ್ದೇನೆ ಎಂದು ಪರಿಸ್ಥಿತಿಯನ್ನು ವಿವರಿಸಿದ ಅಧ್ಯಕ್ಷರು ಅದೇ ಹೊತ್ತಿಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರನ್ನು ವಾಷಿಂಗ್ಟನ್‌ಗೆ ಆಹ್ವಾನಿಸಿದರು ಎಂದು ಶ್ವೇತಭವನ ತಿಳಿಸಿದೆ.
ನವೆಂಬರ್ ಐದರಂದು ಭಾರತಕ್ಕೆ ಬರಲಿರುವ ಒಬಾಮಾ ಐದು ದಿನಗಳ ಕಾಲ ಭಾರತದಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಹಲವು ಮಹತ್ವದ ಮಾತುಕತೆಗಳನ್ನು ನಡೆಸಲಿದ್ದು, ದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಅವುಗಳನ್ನು ರಹಸ್ಯವಾಗಿಡಲಾಗಿದೆ.
ಆರಂಭದಲ್ಲಿ ವಿಶ್ವ ವಿಖ್ಯಾತ ಅಮೃತಸರದ ಸ್ವರ್ಣಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅದನ್ನೀಗ ರದ್ದುಗೊಳಿಸಲಾಗಿದೆ. ಭಯೋತ್ಪಾದಕರ ದಾಳಿಯಿಂದ ನಲುಗಿ ಹೋದ ಮುಂಬೈ ಹೊಟೇಲ್ ತಾಜ್‌ನಲ್ಲಿ ಒಂದು ದಿನ ತಂಗಲಿದ್ದಾರೆ. ಆ ಮೂಲಕ ಉಗ್ರರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಲಿದ್ದಾರೆ ಎಂದು ಇದೀಗ ಹೇಳಲಾಗುತ್ತಿದೆ.
ಭಾರತ-ಅಮೆರಿಕಾ ನಡುವಿನ ಪರಮಾಣು ಬಾಧ್ಯತಾ ಮಸೂದೆಗೆ ಸಹಿ ಮಾಡುವುದು, ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮುಂತಾದುವುದು ಒಬಾಮ ಪ್ರವಾಸ ಪಟ್ಟಿಯಲ್ಲಿರುವ ಪ್ರಮುಖ ಕಾರ್ಯಕ್ರಮಗಳು.