ಕಾಶ್ಮೀರ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ: ಪಾಕ್‌ಗೆ ಅಮೆರಿಕ
ವಾಷಿಂಗ್ಟನ್, ಶುಕ್ರವಾರ, 22 ಅಕ್ಟೋಬರ್ 2010( 13:03 IST )
ಕಾಶ್ಮೀರ ವಿವಾದವನ್ನು ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಸಾರಸಗಟಾಗಿ ತಿರಸ್ಕರಿಸಿರುವ ಅಮೆರಿಕ, ಈ ಸಮಸ್ಯೆಯನ್ನು ಭಾರತ ಮತ್ತು ಪಾಕ್ ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ಕಾಶ್ಮೀರ ವಿಚಾರದಲ್ಲಿ ಪಟ್ಟು ಬಿಡದ ಪಾಕಿಸ್ತಾನ ಸಮಸ್ಯೆ ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನ ಈಗಾಗಲೇ ಸಾಕಷ್ಟು ಬಾರಿ ದುಂಬಾಲು ಬಿದ್ದಿತ್ತು. ಆದರೆ ಇದೀಗ ಪಾಕ್ ಮನವಿಯನ್ನು ಅಮೆರಿಕ ತಿರಸ್ಕರಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿ ಮುಖಭಂಗಕ್ಕೊಳಗಾಗಿದೆ.
ಭಾರತ ಮತ್ತು ಪಾಕಿಸ್ತಾನವೇ ದ್ವಿಪಕ್ಷೀಯ ಮಾತುಕತೆಯೊಂದಿಗೆ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ತೀವ್ರ ವಿವಾದಕ್ಕೆ ಎಡೆಮಾಡಿ ಬಿಕ್ಕಟ್ಟಿಗೆ ಕಾರಣವಾಗಿರುವ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದನ್ನೇ ಅಮೆರಿಕ ಎದುರು ನೋಡುತ್ತಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ.ಕ್ರೌಲೈ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.