ಭೂಕಂಪದಿಂದ ತತ್ತರಿಸಿ ಹೋಗಿದ್ದ ಹೈಟಿಯ ಮಲೀನವಾದ ತಾತ್ಕಾಲಿಕ ಶಿಬಿರದಲ್ಲಿರುವ 135 ಮಂದಿ ಕಾಲರಾ ರೋಗದಿಂದ ಸಾವನ್ನಪ್ಪಿದ್ದು, ಇನ್ನೂ ಸುಮಾರು ಒಂದು ಸಾವಿರ ಮಂದಿ ಕಾಲರಾ ರೋಗದಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಟಿಯ ಇತಿಹಾಸದಲ್ಲಿಯೇ ಕಂಡರಿಯದ ಭೂಕಂಪದಿಂದಾಗಿ ಲಕ್ಷಾಂತರ ಮಂದಿ ಈಗಲೂ ತಾತ್ಕಾಲಿಕ ಶಿಬಿರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಭೂಕಂಪ ಸಂತ್ರಸ್ತರ ಶಿಬಿರ ಮಲೀನದಿಂದಾಗಿ ಕುಲಗೆಟ್ಟು ಹೋಗಿದ್ದು, ಜನರು ಕಾಲರ ರೋಗದಿಂದ ಸಾವನ್ನಪ್ಪುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ತಾತ್ಕಾಲಿಕ ಶೆಡ್‌ನಲ್ಲಿರುವ ಸಾವಿರಾರು ಮಂದಿ ವಾಂತಿಯಿಂದ ಬಳಲುತ್ತಿದ್ದಾರೆ. ಅವರೆಲ್ಲರಿಗೂ ಕಾಲರಾ ಸೋಕಿರುವ ಬಗ್ಗೆ ಶಂಕಿಸಲಾಗಿದ್ದು, ವೈದ್ಯರ ವರದಿಗಾಗಿ ಕಾಯಲಾಗುತ್ತಿದೆ ಎಂದು ವಿಶ್ವಸಂಸ್ಥೆ ಕಚೇರಿಯ ಸಹಾಯಕ ನಿರ್ದೇಶಕಿ ಕ್ಯಾಥರೀನಾ ತಿಳಿಸಿದ್ದಾರೆ.
ಹೈಟಿಯಲ್ಲಿ ಕಾಲರಾ ಸೋಂಕು ಹರಡಿರುವ ಶಂಕೆ ಇದ್ದಿರುವುದಾಗಿ ಹೇಳಿರುವ ಹೈಟಿ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಕ್ಲೌಡೆ ಸುರೇನಾ, ಇದನ್ನು ಸರಕಾರ ಇನ್ನೂ ದೃಢಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.