ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ವಿರುದ್ಧ ಹೋರಾಡಿ: ಪಾಕಿಸ್ತಾನಕ್ಕೆ ಅಮೆರಿಕಾ (USA | Pakistan | Taliban | Al Qaeda)
Bookmark and Share Feedback Print
 
ಅಫಘಾನಿಸ್ತಾನದ ಗಡಿ ಭಾಗದಲ್ಲಿನ ಅಲ್‌ಖೈದಾ ಮತ್ತು ತಾಲಿಬಾನ್ ಭಯೋತ್ಪಾದಕರ ವಿರುದ್ಧ ಪ್ರಾಮಾಣಿಕ ಕಾರ್ಯಾಚರಣೆ ನಡೆಸಿ, ಇಲ್ಲವೇ ಆರ್ಥಿಕ ಸಹಾಯವನ್ನು ಕಳೆದುಕೊಳ್ಳಿ ಎಂದು ಪಾಕಿಸ್ತಾನದ ಆಡಳಿತಕ್ಕೆ ಅಮೆರಿಕಾ ಎಚ್ಚರಿಕೆ ನೀಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿಯಲ್ಲಿ ಹೇಳಿದೆ.

ಅಫ್ಘಾನ್ ತಾಲಿಬಾನ್ ಮತ್ತು ಅದರ ಮೈತ್ರಿ ಸಂಘಟನೆಗಳ ವಿರುದ್ಧ ಪಾಕಿಸ್ತಾನವು ಹೋರಾಟ ನಡೆಸಲು ನಿರುತ್ಸಾಹ ತೋರುತ್ತಿರುವುದು ಮತ್ತು ಬದ್ಧತೆಯಲ್ಲಿ ಕೊರತೆ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕಾ ಇತ್ತೀಚಿನ ದಿನಗಳಲ್ಲಿ ಟೀಕೆ ಮಾಡುತ್ತಾ ಬಂದಿದ್ದು, ಇದೀಗ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಪ್ರಸ್ತಾಪಿಸುತ್ತಿದೆ.

ತನ್ನ ನಾಗರಿಕರನ್ನು ವಾಯುದಾಳಿಗಳ ಮೂಲಕ ಕೊಂದು ಹಾಕಲಾಗುತ್ತಿದೆ ಎಂದು ಪಾಕಿಸ್ತಾನ ಕ್ಯಾತೆ ತೆಗೆಯುತ್ತಿರುವುದು ಕೂಡ ಅಮೆರಿಕಾಕ್ಕೆ ಕಿರಿಕಿರಿ ತರಿಸಿದೆ. ಈ ಸಂಬಂಧ ನಿರ್ಬಂಧಗಳನ್ನು ಹೇರಿದ ಹಿನ್ನೆಲೆಯಲ್ಲಿ ಅಮೆರಿಕಾ ಕ್ಷಮೆ ಯಾಚಿಸಿದೆಯಾದರೂ, ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸೇನೆಗೆ ತರಬೇತಿ ನೀಡುವುದಾಗಲೀ, ಪರಿಕರಗಳನ್ನು ಒದಗಿಸುವುದಾಗಲೀ ಮಾಡದೇ ಇರಲು ಶ್ವೇತಭವನ ನಿರ್ಧರಿಸಿದೆ.

ಅಮೆರಿಕಾದ ಈ ನಡೆಯಿಂದ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಲಿದೆ. ನೂತನ ನೀತಿಯು ಪಾಕ್ ಮಿಲಿಟರಿ ಮೇಲೆ ಅಗಾಧ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ ಎಂದು ಹೇಳಲಾಗುತ್ತಿದೆ.

ನಿನ್ನೆಯಷ್ಟೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ, ಮಿಲಿಟರಿ ಮುಖ್ಯಸ್ಥ ಅಶ್ಫಕ್ ಕಯಾನಿ ಸೇರಿದಂತೆ ಪಾಕ್ ಉನ್ನತ ಅಧಿಕಾರಿಗಳು ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.

ಈ ಹಿಂದೆ ಇಂತಹ ಮಾತುಕತೆ ನಡೆದ ನಂತರ ಪಾಕಿಸ್ತಾನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಹೋರಾಡುತ್ತಿರುವುದನ್ನು ಶ್ವೇತಭವನ ಪ್ರಶಂಸಿಸುತ್ತಿತ್ತು. ಆದರೆ ಈ ಬಾರಿ, ಉಗ್ರರ ಸುರಕ್ಷಿತ ನೆಲೆಗಳನ್ನು ಧ್ವಂಸಗೊಳಿಸಲು ಹೆಚ್ಚಿನ ಒತ್ತಡವನ್ನು ಹಾಕಲಾಗಿದೆ ಎಂಬ ಹೇಳಿಕೆಯನ್ನು ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ