ವಿಕಿಲೀಕ್ಸ್ ಅಮೆರಿಕದ ಕುಕೃತ್ಯಗಳ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದೆ ಎಂಬ ಆತಂಕದ ನಡುವೆಯೇ ಇದೀಗ, 2003ರಲ್ಲಿ ಅಮೆರಿಕ ಆಕ್ರಮಣ ಮಾಡಿದ ನಂತರದ ಅಮಾನವೀಯ ಘಟನೆಗಳ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ವಿಕಿಲೀಕ್ಸ್ ವೆಬ್‌ಸೈಟ್ ಅಧಿಕೃತವಾಗಿ ಘೋಷಿಸಿದೆ.
'ಈ ಬಗ್ಗೆ ಯುರೋಪ್‌ನಲ್ಲಿ ಬೃಹತ್ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆ' ಮಾಡುವುದಾಗಿ ವಿಕಿಲೀಕ್ಸ್ ತನ್ನ ಸಂದೇಶವನ್ನು ಗುರುವಾರ ಟ್ವಿಟರ್ ಪೇಜ್‌ನಲ್ಲಿ ದಾಖಲಿಸಿದೆ.
ಆದರೆ ರಹಸ್ಯ ದಾಖಲೆಗಳನ್ನು ಸಾರ್ವಜನಿಕವಾಗಿ ಯಾವಾಗ ಬಿಡುಗಡೆ ಮಾಡಲಿದೆ ಎಂಬ ದಿನಾಂಕವನ್ನು ಮಾತ್ರ ತಿಳಿಸಿಲ್ಲ. ಆ ನಿಟ್ಟಿನಲ್ಲಿ ಅಮೆರಿಕದ ಇತಿಹಾಸದಲ್ಲಿಯೇ ಬೃಹತ್ ಪ್ರಮಾಣದ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ವಿಕಿಲೀಕ್ಸ್ ಇತ್ತೀಚೆಗಷ್ಟೇ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಸುಮಾರು 77ಸಾವಿರ ಪುಟಗಳಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ ಜಾಗತಿಕವಾಗಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು.
ತದ ನಂತರ ಇರಾಕ್ ಯುದ್ಧದ ವೇಳೆ ಅಮೆರಿಕ ಸೇನೆ ನಡೆಸಿದ ಅಮಾನವೀಯ ಕೃತ್ಯಗಳ ವಿವರಗಳುಳ್ಳ ನಾಲ್ಕು ಲಕ್ಷ ವರದಿಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ವಿಕಿಲೀಕ್ಸ್ ಇತ್ತೀಚೆಗೆ ಪ್ರಕಟಿಸಿತ್ತು. ಆದರೆ ಆ ಸುದ್ದಿಗೆ ತತ್ತರಿಸಿಹೋಗಿದ್ದ ಪೆಂಟಾಗಾನ್ ಅಮೆರಿಕನ್ ಸೇನೆಯ ಗುಪ್ತ ಮಾಹಿತಿಗಳನ್ನು ಪ್ರಕಟಿಸಬೇಡಿ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.