ಇಸ್ಲಾಮಾಬಾದ್, ಮಂಗಳವಾರ, 26 ಅಕ್ಟೋಬರ್ 2010( 12:13 IST )
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹತ್ಯೆಗೈದಿರುವುದಾಗಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ವರದಿಯಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಬೆನಜೀರ್ ಹತ್ಯೆ ಕುರಿತ ತನಿಖಾ ವರದಿಯನ್ನು ಏಜೆನ್ಸಿ ಅಕ್ಟೋಬರ್ 30ರಂದು ಭಯೋತ್ಪಾದನಾ ನಿಗ್ರಹ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇರುವುದಾಗಿ ಡಾನ್ ಪತ್ರಿಕೆ ಹೇಳಿದೆ.
ಭುಟ್ಟೋ ಹತ್ಯೆಯ ಹಿಂದೆ ತೆಹ್ರೀಕ್ ಇ ತಾಲಿಬಾನ್ ವರಿಷ್ಠ ಬೈತುಲ್ಲಾ ಮೆಹ್ಸೂದ್ ಪ್ರಮುಖ ರೂವಾರಿಯಾಗಿದ್ದಾನೆ ಎಂದು ತನಿಖಾ ವರದಿ ಆರೋಪಿಸಿದೆ.
ಪಾಕಿಸ್ತಾನದ ಉತ್ತರ ಭಾಗದ ನಗರವಾದ ರಾವಲ್ಪಿಂಡಿಯಲ್ಲಿ ಬೆನಜೀರ್ ಭುಟ್ಟೋ ಅವರು 2007ರ ಡಿಸೆಂಬರ್ 27ರಂದು ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಿ ಹೊರಡುವ ಸಂದರ್ಭದಲ್ಲಿ ಹತ್ಯೆಗೈಯಲಾಗಿತ್ತು. ರಾಲಿಯಲ್ಲಿ ಪ್ರಭಾವಶಾಲಿ ಆತ್ಮಹತ್ಯಾ ದಾಳಿ ನಡೆಯುವ ಮುನ್ನ ಯುವ ವ್ಯಕ್ತಿಯೊಬ್ಬ ಭುಟ್ಟೋ ತಲೆಯನ್ನು ಗುರಿಯಾಗಿರಿಸಿ ನಿಂತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಬೆನಜೀರ್ ಭುಟ್ಟೋ ಅವರನ್ನು ತಾಲಿಬಾನ್ ಹತ್ಯೆಗೈದಿರುವುದಾಗಿ ಆಂತರಿಕ ಸಚಿವಾಲಯ ಆ ಸಂದರ್ಭದಲ್ಲಿ ಆರೋಪಿಸಿತ್ತು. ಆದರೆ ತನಿಖೆಗೆ ಸಂಬಂಧಿಸಿದಂತೆ ಏಜೆನ್ಸಿ ಈವರೆಗೂ ವರದಿಯನ್ನು ಅಂತ್ಯಗೊಳಿಸಿಲ್ಲ ಎಂದು ಮೂಲವೊಂದು ತಿಳಿಸಿದೆ.