ಇರಾಕ್‌ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಆಡಳಿತದಲ್ಲಿ ಉಪ ಪ್ರಧಾನಿಯಾಗಿದ್ದ ತಾರೀಕ್ ಅಜೀಜ್‌ಗೆ ಇರಾಕ್ ಸುಪ್ರೀಂ ಕ್ರಿಮಿನಲ್ ಕೋರ್ಟ್ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಟೆಲಿವಿಷನ್ ವರದಿಯೊಂದು ತಿಳಿಸಿದೆ.
'ಸದ್ದಾಂ ಹುಸೇನ್ ಆಡಳಿತಾವಧಿಯಲ್ಲಿ ಧಾರ್ಮಿಕ ಪಕ್ಷದ ಸದಸ್ಯರನ್ನು ಕೊಂದಿರುವ ಆರೋಪದಲ್ಲಿ ತಾರೀಕ್ ಅಜೀಜ್‌ಗೆ ಸುಪ್ರೀಂ ಕ್ರಿಮಿನಲ್ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಿರುವುದಾಗಿ' ವರದಿ ವಿವರಿಸಿದೆ.
ಅದೇ ರೀತಿ ಸದ್ದಾಂ ನಿಕಟವರ್ತಿಗಳಾಗಿದ್ದ ಮಾಜಿ ಆಂತರಿಕ ಸಚಿವ ಸಾಡೌನ್ ಶಾಕೆರ್ ಮತ್ತು ಕಾರ್ಯದರ್ಶಿಯಾಗಿದ್ದ ಅಬಿದ್ ಹಾಮೌದ್‌ಗೆ ಗಲ್ಲುಶಿಕ್ಷೆಯ ತೀರ್ಪು ನೀಡಿದೆ.
1991ರಲ್ಲಿ ಸದ್ದಾಂ ಸರ್ವಾಧಿಕಾರದ ಆಡಳಿತದ ವಿರುದ್ಧ ಬಂಡೆದ್ದ ಇರಾಕ್‌ನ ಷಿಯಾ ಸಮುದಾಯದವರನ್ನು ಹತ್ಯೆಗೈದಿರುವುದಕ್ಕೆ ಮೂವರಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಸುಪ್ರೀಂ ಕ್ರಿಮಿನಲ್ ಕೋರ್ಟ್ ನೀಡಿರುವ ತೀರ್ಪಿಗೆ ಇರಾಕ್ ಅಧ್ಯಕ್ಷರ ಅಂಕಿತ ಬಿದ್ದ ಕೂಡಲೇ ಶಿಕ್ಷೆಯನ್ನು ನೀಡಲಾಗುವುದು ಎಂದು ವರದಿ ಹೇಳಿದೆ.